ಚೆನ್ನೈ : ಮಧುರೈನ ‘ತನಿಷ್ಕ್’ ಚಿನ್ನಾಭರಣ ಮಳಿಗೆಯಿಂದ ₹25 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಪ್ರಮುಖ ಆರೋಪಿ ನಿಶಾಂತ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಸೇಲಂಗೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿಯಲಾಗಿದೆ. ತನ್ನ ಗೆಳತಿ ಹಾಗೂ ಸಾಮಾಜಿಕ ಜಾಲತಾಣ ಪ್ರಭಾವಿ (ಇನ್ಫ್ಲುಯೆನ್ಸರ್) ಮೀನಾಕ್ಷಿ ಅವರಿಗೆ ಹೊಸ ಮನೆ ಕಟ್ಟಿಕೊಡಲು ಮತ್ತು ಸಾಲ ತೀರಿಸುವ ಉದ್ದೇಶದಿಂದ ಆರೋಪಿ ಈ ಬೃಹತ್ ದರೋಡೆ ನಡೆಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪ್ರಮುಖ ಆರೋಪಿಗಾಗಿ ಶೋಧ ನಡೆಸಲು ಹೈದರಾಬಾದ್, ಬೆಂಗಳೂರು ಹಾಗೂ ಪೊಲ್ಲಾಚಿಗೆ ಎರಡು ವಿಶೇಷ ಪೊಲೀಸ್ ತಂಡಗಳನ್ನು ರವಾನಿಸಲಾಗಿತ್ತು. ಇದಕ್ಕೂ ಮುನ್ನವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳತಿ ಮೀನಾಕ್ಷಿ ಮತ್ತು ನಿಶಾಂತ್ ಅವರ ತಂದೆ ಸುರೇಶ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ವಿಚಾರಣೆ ವೇಳೆ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ 5 ಕೆ.ಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ನಿಶಾಂತ್ ಬಹಳ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾನೆ. ದರೋಡೆಗೂ ಮುನ್ನ ಗ್ರಾಹಕನ ಸೋಗಿನಲ್ಲಿ ಹಲವು ಬಾರಿ ಆಭರಣ ಮಳಿಗೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದ. ನವೆಂಬರ್ 5ರಂದು ಬೆಳಗಿನ ಜಾವ 3ರಿಂದ 4 ಗಂಟೆಯ ನಡುವೆ ಲಿಫ್ಟ್ ನಿರ್ವಹಣಾ ಪ್ರದೇಶದ ಮೂಲಕ ಮಳಿಗೆಗೆ ನುಗ್ಗಲು ಯತ್ನಿಸಿ ವಿಫಲನಾಗಿದ್ದ. ಬಳಿಕ ನವೆಂಬರ್ 12ರಂದು ಮತ್ತೆ ಬಂದು ಸುಮಾರು 20 ಕೆ.ಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಮಧುರೈನ ಕಾಲೇಜೊಂದರಲ್ಲಿ ‘ವಿಷುಯಲ್ ಕಮ್ಯುನಿಕೇಷನ್’ ವ್ಯಾಸಂಗ ಮಾಡುತ್ತಿದ್ದಾಗ ನಿಶಾಂತ್ಗೆ ಮೀನಾಕ್ಷಿ ಪರಿಚಯವಾಗಿತ್ತು. ನಂತರ ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದ ಆತ, ಮೀನಾಕ್ಷಿ ಅವರ ಯೂಟ್ಯೂಬ್ ಚಾನೆಲ್ಗೆ ವಿಡಿಯೊ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕದ್ದ ಚಿನ್ನಾಭರಣಗಳನ್ನು ಮಾಡಕುಲಂ ಕೆರೆ ಬಳಿಯ ಹೊಲವೊಂದರಲ್ಲಿ ಬಚ್ಚಿಡಲು ಆರೋಪಿ ಯೋಜನೆ ರೂಪಿಸಿದ್ದ. ದರೋಡೆ ನಡೆಸಿದ ಬೆನ್ನಲ್ಲೇ ತಂದೆ ಸುರೇಶ್ಗೆ ಕರೆ ಮಾಡಿದ್ದ ನಿಶಾಂತ್, ತಿರುಪರಕುಂದ್ರಂ ಸೇತುವೆಯ ಬಳಿ ಕರೆಸಿಕೊಂಡು ಚಿನ್ನದ ಬ್ಯಾಗ್ ಹಸ್ತಾಂತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಚಿನ್ನಾಭರಣಗಳ ವಶಕ್ಕಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.








