ಕೋಟ : ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪದ ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳುವ ಯೂಟರ್ನ್ ಬಳಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೀನು ಸಾಗಾಟದ ಇನ್ಸುಲೇಟರ್ ವಾಹನ ಹಾಗೂ ಭಾರೀ ಸರಕು ತುಂಬಿದ್ದ ಲಾರಿ ಡಿಕ್ಕಿಯಾಗಿ ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮೀನು ಸಾಗಾಟದ ಇನ್ಸುಲೇಟರ್ ವಾಹನವು ಹೆದ್ದಾರಿಯ ಪೂರ್ವ ಭಾಗದ ರಸ್ತೆಯಿಂದ ಏಕಾಏಕಿ ಬಲಭಾಗಕ್ಕೆ ತಿರುವು (ಯೂಟರ್ನ್) ಪಡೆಯುತ್ತಿದ್ದ ವೇಳೆ, ಬ್ರಹ್ಮಾವರ ಕಡೆಯಿಂದ ಕುಂದಾಪುರದತ್ತ ಭಾರೀ ಸರಕು ತುಂಬಿಕೊಂಡು ವೇಗವಾಗಿ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಹಾಗೂ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತೀವ್ರವಾಗಿ ಹಾನಿಗೀಡಾಗಿವೆ. ವಾಹನಗಳಲ್ಲಿದ್ದವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಅಪಘಾತದ ಸಂಪೂರ್ಣ ದೃಶ್ಯಾವಳಿಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಕ್ಕಿಯ ಭೀಕರತೆಯನ್ನು ತೆರೆದಿಟ್ಟಿದೆ.








