ಮಂಗಳೂರು: ಆನ್ಲೈನ್ನಲ್ಲಿ ‘ಎಐ ಮೆಡಿಕಲ್ ಇಮೇಜಿಂಗ್’ ಕೌಶಲ್ಯ ವೃದ್ಧಿ ಕೋರ್ಸ್ ಕೊಡಿಸುವುದಾಗಿ ನಂಬಿಸಿ, ಒಟ್ಟು ₹1,27,500 ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ 57 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸುಮಾರು 6 ತಿಂಗಳ ಹಿಂದೆ ಗೂಗಲ್ ಮೂಲಕ ‘ಎಐ ಮೆಡಿಕಲ್ ಇಮೇಜಿಂಗ್’ ಕೋರ್ಸ್ ಬಗ್ಗೆ ‘ಫಾರ್ ಅಪ್ಸ್ಕಿಲ್ಲಿಂಗ್ ಇನ್ ಎಐ’ ಎಂಬ ಶೀರ್ಷಿಕೆಯಡಿ ಹುಡುಕಾಟ ನಡೆಸಿದ್ದರು. ಆ ವೇಳೆ ಸರ್ಚ್ ರಿಸಲ್ಟ್ನಲ್ಲಿ +917999838229 ನಂಬರ್ ಹಾಗೂ ನೇಮಿ ಆರಾಧನಾ (Nemi Aradhana – ಸೇಲ್ಸ್ ಎಕ್ಸಿಕ್ಯೂಟಿವ್) ಎಂಬ ಹೆಸರು ಕಂಡುಬಂದಿದೆ.
ಕೂಡಲೇ ಆ ನಂಬರ್ಗೆ ಸಂಪರ್ಕಿಸಿದ ದೂರುದಾರರು ಕೋರ್ಸ್ ಕುರಿತು ಮಾಹಿತಿ ಪಡೆದು, ತಮ್ಮ ಕೆವೈಸಿ (KYC) ಮಾಹಿತಿ ಹಾಗೂ ಗುರುತಿನ ಚೀಟಿ ನೀಡಿ ನೋಂದಣಿ ಮಾಡಿಕೊಂಡಿದ್ದರು. ನಂತರ ‘ಎಐ ಇಮೇಜಿಂಗ್ ಫಾರ್ ಹೆಲ್ತ್ಕೇರ್ ಪ್ರೊಫೆಷನಲ್ಸ್ ನೇಮಿ–ಕೋರ್ಸ್ 46’ ಹೆಸರಿನಲ್ಲಿ ಸಂಜೆ 6 ರಿಂದ 7.30ರವರೆಗೆ ಆನ್ಲೈನ್ ತರಗತಿಗಳು ನಡೆಯಲಿವೆ ಎಂದು ವಂಚಕರು ನಂಬಿಸಿದ್ದರು. ಆನ್ಲೈನ್ ತರಗತಿ ಹಾಗೂ ನೋಂದಣಿಗಾಗಿ ಹಣ ಪಾವತಿಸುವಂತೆ ತಿಳಿಸಿದ ವಂಚಕರ ಮಾತು ನಂಬಿದ ದೂರುದಾರರು, ಅವರು ಸೂಚಿಸಿದ ಬ್ಯಾಂಕ್ ಖಾತೆಗೆ 2026ರ ಏಪ್ರಿಲ್ 30ರಂದು ₹10,000 ಹಾಗೂ ಮೇ 3ರಂದು ₹1,17,500 ಸೇರಿ ಎನ್ಇಎಫ್ಟಿ (NEFT) ಮೂಲಕ ಒಟ್ಟು ₹1,27,500 ಹಣವನ್ನು ವರ್ಗಾಯಿಸಿದ್ದಾರೆ.
‘ಎಎಂಸ್ಕಿಲ್ಸ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್ (NE-MI)’ ಹೆಸರಿನಲ್ಲಿ ಆನ್ಲೈನ್ ತರಗತಿ ನೀಡುವುದಾಗಿ ನಂಬಿಸಿ ಹಣ ಪಡೆದರೂ, ಯಾವುದೇ ಸರಿಯಾದ ತರಗತಿಗಳನ್ನು ನೀಡದೆ ವಂಚನೆ ಎಸಗಲಾಗಿದೆ. ಅಪರಿಚಿತ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








