ಮಂಗಳೂರು: ಸಾರ್ವಜನಿಕರಿಗೆ ಶುಚಿ-ರುಚಿಯಾದ ಹಾಗೂ ಸುರಕ್ಷಿತ ಆಹಾರ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ನಗರದ ವಿವಿಧೆಡೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಐದು ವಿಶೇಷ ತಂಡಗಳು ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಿವೆ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ಪ್ರದೇಶದಲ್ಲಿರುವ ‘ಎಂ.ಆರ್. ಸ್ವೀಟ್ಸ್’ ಸಿಹಿ ತಿಂಡಿ ತಯಾರಿಕಾ ಘಟಕಕ್ಕೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಘಟಕದಲ್ಲಿ ಕನಿಷ್ಠ ನೈರ್ಮಲ್ಯವನ್ನೂ ಕಾಪಾಡಿಕೊಳ್ಳದೆ ಅತ್ಯಂತ ಕಲುಷಿತ ವಾತಾವರಣದಲ್ಲಿ ಸಿಹಿತಿಂಡಿ ಹಾಗೂ ಇತರ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಅಲ್ಲಿದ್ದ ಅಸುರಕ್ಷಿತ ಆಹಾರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಜತೆಗೆ, ನೈರ್ಮಲ್ಯ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೊಲ್ಯದ ಐಡಿಯಲ್ ಐಸ್ ಕ್ರೀಮ್ ಘಟಕ: ಕೊಲ್ಯದಲ್ಲಿರುವ ಜನಪ್ರಿಯ ‘ಐಡಿಯಲ್ ಐಸ್ ಕ್ರೀಮ್ಸ್’ ಕೋಲ್ಡ್ ಸ್ಟೋರೇಜ್ ಯೂನಿಟ್ಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಐಸ್ ಕ್ರೀಮ್ ಶೇಖರಣೆ ವೇಳೆ ಕಡ್ಡಾಯವಾಗಿ ಪಾಲಿಸಬೇಕಾದ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿತು. ಈ ವೇಳೆ ಕಂಡುಬಂದ ಕೆಲವೊಂದು ಲೋಪದೋಷಗಳನ್ನು ಕೂಡಲೇ ಸರಿಪಡಿಸಿಕೊಳ್ಳುವಂತೆ ಘಟಕದ ನಿರ್ವಹಣೆಗೆ ನೋಟಿಸ್ ಜಾರಿ ಮಾಡಲಾಗಿದೆ.
ತಲಪಾಡಿಯ ಉಡುಪಿ ಕೆಫೆ: ತಲಪಾಡಿಯಲ್ಲಿರುವ ‘ಉಡುಪಿ ಕೆಫೆ’ ರೆಸ್ಟೋರೆಂಟ್ನ ಅಡುಗೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಆಹಾರ ತಯಾರಿಕೆಯಲ್ಲಿ ಸುರಕ್ಷತಾ ನಿಯಮಗಳ ಪಾಲನೆಯನ್ನು ಗಮನಿಸಲಾಗಿದೆ. ಜತೆಗೆ, ಆಹಾರದ ಗುಣಮಟ್ಟ ಪರೀಕ್ಷೆಗಾಗಿ ಅಲ್ಲಿಂದ ವಿವಿಧ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲೆಯ ಎಲ್ಲಾ ಆಹಾರ ಉದ್ಯಮಗಳು ಮತ್ತು ಹೋಟೆಲ್ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುವುದು ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.








