ರಾಮನಗರ: ಕಲ್ಯಾಣ ಮಂಟಪವೊಂದರಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ರಾಮನಗರ ಜಿಲ್ಲಾಧಿಕಾರಿ ಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು, ನಿಯಮ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ರಾಮನಗರ ಡಿಸಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯಕ್ರಮ ನಡೆಯುತ್ತಿದೆ. ನಿಯಮಗಳ ಪ್ರಕಾರ, ಬಿಎಲ್‌ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪರಿಶೀಲನೆ ನಡೆಸಬೇಕು ಹಾಗೂ ನಿಗದಿತ ಅರ್ಜಿಗಳನ್ನು ವಿತರಿಸಬೇಕು. ಆದರೆ ರಾಮನಗರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 23ರ ಟಿಪ್ಪು ನಗರ ಕಲ್ಯಾಣ ಮಂಟಪವೊಂದರಲ್ಲಿ ಬಿಎಲ್‌ಒಗಳು ಮನೆ ಮನೆಗೆ ಹೋಗುವ ಬದಲು, ಜನರನ್ನು ಒಂದೇ ಕಡೆ ಸೇರಿಸಿ ‘ಎಸ್‌ಐಆರ್ ಕ್ಯಾಂಪ್’ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದರು.
ನಿಯಮ ಉಲ್ಲಂಘಿಸಿ ಕಲ್ಯಾಣ ಮಂಟಪದಲ್ಲಿ ಕ್ಯಾಂಪ್ ನಡೆಸಿದ ಅಧಿಕಾರಿಗಳನ್ನು ತಕ್ಷಣವೇ ವಿಚಾರಣೆಗೆ ಒಳಪಡಿಸಬೇಕು. ಈ ವಿಚಾರಣೆಯ ಸಂಪೂರ್ಣ ವರದಿಯನ್ನು ವಿಳಂಬವಿಲ್ಲದೆ ತಮಗೆ ಸಲ್ಲಿಸಬೇಕು ಎಂದು ಡಿಸಿಗೆ ಆದೇಶಿಸಿದ್ದಾರೆ. ನಿಯಮ ಉಲ್ಲಂಘನೆ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.








