ಇಂದೋರ್: ರಕ್ಷಾಬಂಧನದ ಶುಭದಿನದಂದು ಜೈಲಿನಲ್ಲಿರುವ ತನ್ನ ಸಹೋದರನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಕಾರಣಕ್ಕೆ ಸಿಟ್ಟಿಗೆದ್ದ ನಾದಿನಿಯೊಬ್ಬಳು, ಅತ್ತಿಗೆಯನ್ನು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿ, ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದಿರುವ ಭೀಕರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಪಾರ್ವತಿ ಬಾಯಿ ಕುಶ್ವಾಹ್ ಎಂಬಾಕೆಯನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ. ವಂದನಾ ಮೃತಪಟ್ಟ ದುರ್ದೈವಿ.
ಮೃತ ವಂದನಾ ಅವರು ಆಗಸ್ಟ್ 11ರಂದು ಕುಟುಂಬಸ್ಥರ ವಿರೋಧದ ನಡುವೆಯೂ ಉಪೇಂದ್ರ ಎಂಬವರನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ ದಂಪತಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆರೋಪಿ ಪಾರ್ವತಿಯ ಸಹೋದರ ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಸ್ತುತ ಜೈಲಿನಲ್ಲಿದ್ದಾನೆ. ರಕ್ಷಾಬಂಧನದ ದಿನದಂದು ವಂದನಾ ಆತನ ಬಗ್ಗೆ ಕ್ಷುಲ್ಲಕವಾಗಿ ಹಾಗೂ ವ್ಯಂಗ್ಯವಾಗಿ ಮಾತನಾಡಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡ ಪಾರ್ವತಿ ಹಾಗೂ ವಂದನಾ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಮನೆಯಲ್ಲಿದ್ದ ಚಾಕುವಿನಿಂದ ಪಾರ್ವತಿ, ವಂದನಾಳ ಕುತ್ತಿಗೆಗೆ ಎರಡು ಬಾರಿ ಭೀಕರವಾಗಿ ಇರಿದು ಕೊಲೆ ಮಾಡಿದ್ದಾಳೆ.
ಕೊಲೆ ನಡೆದ ಸಮಯದಲ್ಲಿ ಪಾರ್ವತಿಯ ಮಕ್ಕಳು ಶಾಲೆಗೆ ತೆರಳಿದ್ದರೆ, ಪತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೃತ್ಯ ಎಸಗಿದ ಬಳಿಕ ಶವವನ್ನು ಎಳೆದುಕೊಂಡು ಹೋಗಿ ಮನೆಯ ಹೊರಗಿದ್ದ ನೀರಿನ ಟ್ಯಾಂಕ್‌ಗೆ ಎಸೆದ ಪಾರ್ವತಿ, ಏನೂ ತಿಳಿಯದವಳಂತೆ ಪತಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಳು. ಇತ್ತ ವಂದನಾ ಕಾಣೆಯಾಗಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ಕೈಗೊಂಡು ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಪಾರ್ವತಿಯ ಚಲನವಲನಗಳ ಮೇಲೆ ಅನುಮಾನ ವ್ಯಕ್ತವಾಗಿದೆ. ಆರಂಭದಲ್ಲಿ ತನಗೇನೂ ತಿಳಿಯದೆಂದು ಪೊಲೀಸರನ್ನು ದಿಕ್ಕುತಪ್ಪಿಸಲು ಯತ್ನಿಸಿದ ಆಕೆ, ಕೊಲೆಗೆ ಬಳಸಿದ ಚಾಕುವಿನ ಮೇಲಿದ್ದ ಬೆರಳಚ್ಚು ಹಾಗೂ ತನಿಖೆಯ ತೀವ್ರತೆಗೆ ಕುಸಿದು ಬಿದ್ದು ಕೃತ್ಯ ಒಪ್ಪಿಕೊಂಡಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.








