ಲಖನೌ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ತನಿಖೆಯ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತಿದ್ದು, ಕಳವಾದ ಕೋಟ್ಯಂತರ ರೂಪಾಯಿ ಹಣದ ಒಂದು ಭಾಗವನ್ನು ಆರೋಪಿಗಳು ಷೇರು ಮಾರುಕಟ್ಟೆ ಹಾಗೂ ವಿವಿಧ ಹಣಕಾಸು ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಣದ ಮೂಲವನ್ನು ಮರೆಮಾಚುವುದಷ್ಟೇ ಅಲ್ಲದೆ, ದೇವರ ಹಣದಿಂದಲೇ ಲಾಭ ಗಳಿಸುವ ವ್ಯವಸ್ಥಿತ ಸಂಚು ಆರೋಪಿಗಳದ್ದಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಯೋಧ್ಯೆ ಪೊಲೀಸರು ಆರೋಪಿಗಳ ಮನೆಗಳ ಮೇಲೆ ಮತ್ತೊಮ್ಮೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದು, ಅಕ್ರಮ ವಹಿವಾಟು ಪತ್ತೆಯಾದ ಹಿನ್ನೆಲೆಯಲ್ಲಿ ಬರೋಬ್ಬರಿ 30 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾ ಹಾಗೂ ಸಹ ಆರೋಪಿ ಅವಿನಾಶ್ ಶುಕ್ಲಾ ಕಳವಾದ ದೇಣಿಗೆ ಹಣವನ್ನು ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಕದ್ದ ಹಣವನ್ನು ಮರೆಮಾಚಲು ಸಂಬಂಧಿಕರು ಹಾಗೂ ಆಪ್ತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ಬಳಿಕ ಅದನ್ನು ತಮ್ಮ ಖಾತೆಗಳಿಗೆ ಮರಳಿ ವರ್ಗಾಯಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಇದೇ ದೇವಸ್ಥಾನದ ದೇಣಿಗೆ ಹಣವನ್ನು ಸಾರ್ವಜನಿಕರಿಗೆ ಬಡ್ಡಿಗೂ ನೀಡುತ್ತಿದ್ದರು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಮೂವರು ಆರೋಪಿಗಳನ್ನು 40 ಗಂಟೆಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು (FSL) ಹಾಗೂ ಸ್ವತಂತ್ರ ಸಾಕ್ಷಿದಾರರ ಸಮ್ಮುಖದಲ್ಲಿ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಅವರ ಮನೆಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಈ ವೇಳೆ ಹಣದ ಜಾಡು ಪತ್ತೆಹಚ್ಚಲು ನೆರವಾಗುವ ಎಲೆಕ್ಟ್ರಾನಿಕ್ ಸಾಧನಗಳು, ಹೂಡಿಕೆ ದಾಖಲೆಗಳು ಹಾಗೂ ನಕಲಿ ದೇಣಿಗೆ ರಸೀದಿಗಳನ್ನು ವಶಪಡಿಸಿಕೊಳ್ಳಲಾಗಿದೆ.








