ಕಠ್ಮಂಡು: ಹಠಾತ್ ಪ್ರವಾಹಕ್ಕೆ ಊರೇ ಸರ್ವನಾಶ.. ಜನರ ಮಾರಣಹೋಮ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರು. ಇದೆಲ್ಲದರ ನಡುವೆ ಸಾವಿನ ಕದ ತಟ್ಟಿ ಬದುಕಿರುವ ಕೆಲವರು.. ವಿನಾಶಕಾರಿ ಜಲಪ್ರಳಯ ಉಂಟಾಗಿ 9 ದಿನಗಳ ಬಳಿಕ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕನೋರ್ವ ಪವಾಡದಂತೆ ಬದುಕಿ ಬಂದಿದ್ದಾರೆ.
ತ್ರಿಶೂಲಿಯ 3ಎ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ ನೇಪಾಳದ ಮಾಧೇಶ್ ಪ್ರಾಂತ್ಯದ ಸಪ್ತಾರಿ ಜಿಲ್ಲೆಯವರಾದ 30 ವರ್ಷದ ಸಂಜಯ್ ಸಾಹ್ ಅವರನ್ನಿಂದು ರಕ್ಷಣಾ ಪಡೆಗಳು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ರಕ್ಷಣೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಜಯ್, ಕಳೆದ 9 ದಿನಗಳಿಂದ ಹರೇ ಕೃಷ್ಣ ಎಂದು ಜಪ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅವರ ಜಪ ಇಂದು ಫಲಿಸಿದ್ದು, ಕೃಷ್ಣ ಜನ್ಮಾಷ್ಟಮಿಯಂದೇ ಅವರನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಸಂಜಯ್ ಅವರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ತ್ರಿಶೂಲಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿದುಬಂದಿದೆ.
ಸಂಜಯ್ ಸಾಹ್ ಅವರೊಂದಿಗೆ ಅದೇ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಕಬೀರ್ ಮಹಾರ್ಜನ್ (45) ಎಂಬ ಕಾರ್ಮಿಕನನ್ನು ರಕ್ಷಿಸಲಾಗಿದೆ. ನೇಪಾಳ ಸೇನೆ ನೇತೃತ್ವದ ಜಂಟಿ ಭದ್ರತಾ ಕಮಾಂಡ್, ಸುರಂಗದೊಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ವಿಶೇಷ ಉಪಕರಣಗಳನ್ನು ಬಳಸಿಕೊಂಡು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಸುರಂಗದ ಒಳಗಿನಿಂದ ಧ್ವನಿ ಕೇಳಿ ಬಂದ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ.
ನೇಪಾಳ-ಟಿಬೆಟ್ ಗಡಿಯ ಬಳಿ ಹಿಮಪಾತದಿಂದ ಉಂಟಾದ ಹಠಾತ್ ಪ್ರವಾಹವು ನೇಪಾಳದಲ್ಲಿ 1,250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 4,700ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.








