ನವದೆಹಲಿ: ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ‘ಸಂಸದ್ ಚಲೋ’ ಮೆರವಣಿಗೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಆಕ್ಷೇಪಾರ್ಹ ಪೋಸ್ಟ್ಗಳು, ನಿಂದನೀಯ ಕಾಮೆಂಟ್ಗಳು ಮತ್ತು ಡೀಪ್ಫೇಕ್ ವಿಡಿಯೊಗಳ ವಿರುದ್ಧ ದೆಹಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ಜುಲೈ 20ರಂದು ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಹಲವು ಸಾಮಾಜಿಕ ಜಾಲತಾಣ ಖಾತೆಗಳಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಕೆಲವು ಪ್ರಮುಖ ಸುದ್ದಿ ಪೋರ್ಟಲ್ಗಳ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿ ಹಾಗೂ ನಿಂದನೀಯ ಪೋಸ್ಟ್ಗಳನ್ನು ಪ್ರಕಟಿಸಿದ ಬಳಕೆದಾರರ ವಿವರಗಳನ್ನು ಒದಗಿಸುವಂತೆ ‘ಎಕ್ಸ್’ ವೇದಿಕೆಗೆ ಸೂಚಿಸಲಾಗಿದೆ.
ದೆಹಲಿ ಪೊಲೀಸ್ ಸೈಬರ್ ಕ್ರೈಮ್ ವಿಭಾಗವು ಪ್ರಧಾನಿ ವಿರುದ್ಧದ ಆಕ್ಷೇಪಾರ್ಹ ಕಾಮೆಂಟ್ಗಳು, ವಿಡಿಯೊಗಳು ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಪೋಸ್ಟ್ಗಳನ್ನು ತಕ್ಷಣವೇ ತೆಗೆದುಹಾಕುವಂತೆ ವಿವಿಧ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ, ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ದಿನಪೂರ್ತಿ ವಿವಿಧ ಆನ್ಲೈನ್ ವೇದಿಕೆಗಳನ್ನು ಪರಿಶೀಲಿಸಿ ಕಾನೂನುಬಾಹಿರ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿಸಿದೆ.
ಪ್ರತಿಭಟನೆಯ ನೆಪದಲ್ಲಿ ಸುಳ್ಳು ಸುದ್ದಿ, ವದಂತಿ ಹಾಗೂ ಡೀಪ್ಫೇಕ್ ವಿಡಿಯೊಗಳನ್ನು ಹರಡುತ್ತಿದ್ದರೆಂಬ ಆರೋಪದಡಿ, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದೆ ಎಂದು ಶಂಕಿಸಲಾಗಿರುವ 400ಕ್ಕೂ ಹೆಚ್ಚು ‘ಎಕ್ಸ್’ ಖಾತೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಸೈಬರ್ ವಿಭಾಗ, ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಅಥವಾ ಪ್ರಚೋದನಕಾರಿ ಪೋಸ್ಟ್ಗಳನ್ನು ಪ್ರಕಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆ ಕೆಲ ವಿದೇಶಿ ಹಾಗೂ ಸಮಾಜವಿರೋಧಿ ಶಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ವಿಡಿಯೊಗಳು ಮತ್ತು ತಪ್ಪು ಮಾಹಿತಿಯನ್ನು ಹರಡಿ ಗಲಭೆಗೆ ಪ್ರಚೋದನೆ ನೀಡಲು ಯತ್ನಿಸುತ್ತಿವೆ ಎಂಬ ಆರೋಪಗಳ ನಡುವೆಯೇ ಈ ಸೈಬರ್ ತನಿಖೆ ಮತ್ತಷ್ಟು ತೀವ್ರಗೊಂಡಿದೆ.








