ಹೆಬ್ರಿ : ತಾಲೂಕು ಪಂಚಾಯತ್ ವ್ಯಾಪ್ತಿಯ ‘ಧನಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ’ದಲ್ಲಿ ಕಳೆದ ಆರು ವರ್ಷಗಳಿಂದ ಲಕ್ಷಾಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿರುವ ಭಾರಿ ಆರ್ಥಿಕ ಅಕ್ರಮ ಪ್ರಕರಣ ಬೆಳಕಿಗೆ ಬಂದಿದೆ.
ಹೆಬ್ರಿ ತಾಲೂಕು ಪಂಚಾಯತ್‌ನ ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಉಮಾ ಅವರು ನೀಡಿದ ದೂರಿನನ್ವಯ, ಧನಲಕ್ಷ್ಮಿ ಸಂಜೀವಿನಿ ಒಕ್ಕೂಟದಲ್ಲಿ ಕಳೆದ 8 ವರ್ಷಗಳಿಂದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ (ಬುಕ್ ಕೀಪರ್) ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ನಂದಿನಿ ಎಂಬುವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತೆ ನಂದಿನಿ ಅವರು 2020 ರಿಂದ 2026ರ ಅವಧಿಯಲ್ಲಿ ಒಕ್ಕೂಟದ ಸದಸ್ಯತ್ವ ಹೊಂದಿರುವ ವಿವಿಧ ಸ್ವ-ಸಹಾಯ ಸಂಘಗಳ ಸದಸ್ಯರು ಮರುಪಾವತಿಸಿದ್ದ ಸಾಲದ ಹಣವನ್ನು ಒಕ್ಕೂಟದ ಅಧಿಕೃತ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಅಕ್ರಮ ಎಸಗಲು ಅವರು ಎರಡೆರಡು ಖಾತೆ ಪುಸ್ತಕ (ಲೆಡ್ಜರ್) ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಒಟ್ಟು ₹28,19,489 (ಇಪ್ಪತ್ತೆಂಟು ಲಕ್ಷದ ಹತ್ತೊಂಬತ್ತು ಸಾವಿರದ ನಾಲ್ಕು ನೂರು ಎಂಭತ್ತೊಂಬತ್ತು ರೂಪಾಯಿ) ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಬೃಹತ್ ವಂಚನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 316(4), 318(2), 336(3), ಮತ್ತು 340(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








