ಉಡುಪಿ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಮುದರಂಗಡಿ ಉದ್ಯಮಿ ಡೇವಿಡ್ ಡಿ’ಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಶುಕ್ರವಾರ (ಆಗಸ್ಟ್ 8) ಮಾಧ್ಯಮಗಳಿಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಭಾರಿ ಪಡೆ ಹಾಗೂ ಉತ್ತರ ಕನ್ನಡ ಪೊಲೀಸರ ನೆರವಿನೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಭಾರತದ ಮೂವರು ಕುಖ್ಯಾತ ಸುಪಾರಿ ಕಿಲ್ಲರ್ಗಳನ್ನು ಹೆಡೆಮುರಿ ಕಟ್ಟಲಾಗಿದೆ.
ಬಂಧಿತರು ಸಾಮಾನ್ಯ ಅಪರಾಧಿಗಳಲ್ಲ, ಬದಲಿಗೆ ವಿವಿಧ ರಾಜ್ಯಗಳಲ್ಲಿ ಕೊಲೆ, ದರೋಡೆ ಕೇಸ್ಗಳಲ್ಲಿ ವಾಂಟೆಡ್ ಆಗಿದ್ದ ವೃತ್ತಿಪರ ಹಂತಕರು:
ರಾಜು (ಯುಪಿ) – ಈತನ ವಿರುದ್ಧ 5 ರಾಜ್ಯಗಳಲ್ಲಿ 26 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. (ಮುಖ್ಯ ಶೂಟರ್)
ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23) (ಉತ್ತರಾಖಂಡ) – 4 ರಾಜ್ಯಗಳಲ್ಲಿ 8 ಪ್ರಕರಣಗಳು.
ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್ (38) (ಬಿಹಾರ) – 12 ಕ್ರಿಮಿನಲ್ ಪ್ರಕರಣಗಳು.
ಎಸ್ಪಿ ಹರಿರಾಮ್ ಶಂಕರ್ ಅವರ ಪ್ರಕಾರ, ಡೇವಿಡ್ ಅವರೊಂದಿಗೆ ವ್ಯವಹಾರ ಹೊಂದಿದ್ದ ಉತ್ತರ ಭಾರತದ ವ್ಯಕ್ತಿಯೊಬ್ಬ ಈ ಕೊಲೆಗೆ ಗುತ್ತಿಗೆ (Supari) ನೀಡಿದ್ದಾನೆ. ಸುಮಾರು ₹2 ರಿಂದ ₹3 ಕೋಟಿ ಹಣಕಾಸಿನ ವಿವಾದವೇ ಹತ್ಯೆಗೆ ಮೂಲ ಕಾರಣ. ಇದರಲ್ಲಿ ಯುಪಿಸಿಎಲ್ (UPCL) ಗುತ್ತಿಗೆ ಕೆಲಸಕ್ಕೆ ಸಂಬಂಧಿಸಿದ ವ್ಯಕ್ತಿಯ ಭಾಗಿಯಾಗಿರುವ ಶಂಕೆ ಇದ್ದು, ಪ್ರಮುಖ ಆರೋಪಿ ರಾಜುನ ಖಾತೆಗೆ ₹2 ಲಕ್ಷ ಮುಂಗಡ ಹಣ ಜಮೆಯಾಗಿತ್ತು. ಪ್ರಕರಣದ ಮಾಸ್ಟರ್ ಮೈಂಡ್ ಹುಡುಕಾಟಕ್ಕೆ ಈಗಾಗಲೇ ಒಂದು ಪೊಲೀಸ್ ತಂಡ ಉತ್ತರ ಭಾರತಕ್ಕೆ ತೆರಳಿದೆ.
ಕೃತ್ಯ ಎಸಗಿ ಭಟ್ಕಳದ ಕಡೆಗೆ ಬಸ್ನಲ್ಲಿ ಎಸ್ಕೇಪ್ ಆಗುತ್ತಿದ್ದ ಆರೋಪಿಗಳನ್ನು ಬೈಂದೂರಿನ ಚೆಕ್ಪೋಸ್ಟ್ನಲ್ಲಿ ಪೊಲೀಸರು ಬ್ಲಾಕ್ ಮಾಡಿದ್ದರು. ಈ ವೇಳೆ ಬಸ್ನಿಂದ ಇಳಿದು ಓಡಿದ ಪ್ರಮುಖ ಆರೋಪಿ ರಾಜು, ಕಾಪು ಪಿಎಸ್ಐ ತೇಜಸ್ವಿ ಅವರನ್ನು ತಳ್ಳಿ ತಾನಿಟ್ಟುಕೊಂಡಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಲು ಯತ್ನಿಸಿದ್ದ. ತಕ್ಷಣ ಆತ್ಮರಕ್ಷಣೆಗಾಗಿ ಪಿಎಸ್ಐ ತೇಜಸ್ವಿ ನಡೆಸಿದ ಫೈರಿಂಗ್ನಲ್ಲಿ ರಾಜುನ ಕಾಲಿಗೆ ಗುಂಡೇಟು ಬಿದ್ದು ಆತ ಧರೆಗುರುಳಿದ್ದ. ನಂತರ ಪರಾರಿಯಾಗಿದ್ದ ಇನ್ನಿಬ್ಬರನ್ನು ಭಟ್ಕಳ ಮತ್ತು ಕುಮಟಾದಲ್ಲಿ ವಶಕ್ಕೆ ಪಡೆಯಲಾಗಿದೆ.
ಡೇವಿಡ್ ಕಾರು ಹತ್ತುವಾಗ 10 ಸುತ್ತುಗಳ ಸಾಮರ್ಥ್ಯವಿದ್ದ ಪಿಸ್ತೂಲ್ನಿಂದ ಮೂರು ಬಾರಿ ತೀರಾ ಹತ್ತಿರದಿಂದ ಶೂಟ್ ಮಾಡಲಾಗಿತ್ತು. ಆರೋಪಿಗಳು ಬಳಸಿದ್ದ ಬೈಕ್ ಅನ್ನು ಎರ್ಮಾಳಿನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಶಾಲಾ ಬಸ್ನ ನಂಬರ್ ಪ್ಲೇಟ್ ಬಳಸಲಾಗಿತ್ತು. ಪ್ರತಿಯೊಬ್ಬರೂ 2-3 ಫೋನ್ ಹಾಗೂ 3-4 ಸಿಮ್ ಕಾರ್ಡ್ ಹೊಂದಿದ್ದರು. ಹಂತಕರಿಗೆ ಪರಸ್ಪರರ ನಿಜವಾದ ಹೆಸರುಗಳೇ ತಿಳಿದಿರಲಿಲ್ಲ! ಆರೋಪಿಗಳು 2 ತಿಂಗಳ ಹಿಂದೆಯೇ ಉಡುಪಿಗೆ ಬಂದು ತಂಗಿದ್ದರು. ಇವರಿಗೆ ಸ್ಥಳೀಯವಾಗಿ ನೆರವು ನೀಡಿದವರ ಪತ್ತೆಗೆ ತನಿಖೆ ಚುರುಕುಗೊಂಡಿದೆ.








