ಮಹಾರಾಷ್ಟ್ರ : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸರ್ಕಾರಿ ಅನುದಾನಿತ ಬುಡಕಟ್ಟು ವಸತಿ ಶಾಲೆಯೊಂದರಲ್ಲಿ ಮಧ್ಯರಾತ್ರಿ ವಿಷಪೂರಿತ ಹಾವು ಕಚ್ಚಿ ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಮೃತಪಟ್ಟಿದ್ದು, ಮತ್ತೂ ಮೂವರು ಬಾಲಕಿಯರು ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಧನೋರಾ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಪ್ತಲೈ ಗ್ರಾಮದ ಅನುದಾನಿತ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಾನುವಾರ ಮಧ್ಯರಾತ್ರಿ ಈ ಭೀಕರ ದುರಂತ ಸಂಭವಿಸಿದೆ. ಹಾಸ್ಟೆಲ್‌ನ ಕೊಠಡಿಯಲ್ಲಿ ನೆಲದ ಮೇಲೆ ಮಲಗಿದ್ದಾಗ ಬಾಲಕಿಯರಿಗೆ ವಿಷಪೂರಿತ ಹಾವು ಕಚ್ಚಿದೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ 8, 12 ಮತ್ತು 14 ವರ್ಷದ ಮೂವರು ಬುಡಕಟ್ಟು ಬಾಲಕಿಯರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 11 ರಿಂದ 14 ವರ್ಷದೊಳಗಿನ ಮತ್ತೂ ಮೂವರು ಬಾಲಕಿಯರಿಗೆ ಹಾವು ಕಚ್ಚಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಜಿಲ್ಲಾಡಳಿತವು ತನಿಖೆಗೆ ಆದೇಶಿಸಿದೆ. “ಘಟನೆ ಹೇಗೆ ಸಂಭವಿಸಿತು, ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಹಾಗೂ ಶಾಲಾ ಆಡಳಿತ ಮಂಡಳಿಯು ಮುನ್ನೆಚ್ಚರಿಕೆಯ ನಿಯಮಗಳನ್ನು ಪಾಲಿಸಿತ್ತೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು” ಎಂದು ಗಡ್ಚಿರೋಲಿ ಜಿಲ್ಲಾಧಿಕಾರಿ ಅವಿಷ್ಯಂತ್ ಪಾಂಡಾ ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ತಕ್ಷಣವೇ ಹಾವು ವಿಷ ನಿರೋಧಕ ಔಷಧಿ ನೀಡಲಾಗಿದ್ದು, ವೈದ್ಯಕೀಯ ತಂಡಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿವೆ. ಗಾಯಾಳುಗಳಿಗೆ ಯಾವುದೇ ಕೊರತೆಯಾಗದಂತೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.








