ಮುಂಬೈ: ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಎದುರಾಗಿದೆ. ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಐಷಾರಾಮಿ ನಿವಾಸ ‘ಜಲ್ಸಾ’ ಬಂಗಲೆಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅನಾಮಧೇಯ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ.
ಈ ಬೆಳವಣಿಗೆಯಿಂದ ಬಾಲಿವುಡ್ ವಲಯದಲ್ಲಿ ಆತಂಕ ಮೂಡಿದ್ದು, ಮುಂಬೈ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿರುವ ಬೆನ್ನಲ್ಲೇ ಮುಂಬೈ ಮೇಯರ್ ರಿತು ತಾವ್ಡೆ ಅವರ ಕಚೇರಿಗೂ ಇದೇ ರೀತಿಯ ಬೆದರಿಕೆ ಸಂದೇಶ ರವಾನೆಯಾಗಿದೆ. ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಲ್ಲಿ ಎರಡೂ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಬೆದರಿಕೆ ಸಂದೇಶದ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಬೆದರಿಕೆ ಸಂದೇಶದ ಮೂಲ ಪತ್ತೆಹಚ್ಚಲು ಹಾಗೂ ಅದರ ಸತ್ಯಾಸತ್ಯತೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದೇ ಇ-ಮೇಲ್ ಮೂಲಕ ಎರಡು ಪ್ರಮುಖ ಸ್ಥಳಗಳಿಗೆ ಬೆದರಿಕೆ ಬಂದಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದ್ದು, ಮುಂಬೈನಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.








