ಮಂಗಳೂರು : ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿ ಹಾಗೂ ಪ್ಲಾಟ್ಫಾರ್ಮ್ ನಡುವಿನ ಕಂದಕಕ್ಕೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರನ್ನು, ಆನ್ಡ್ಯೂಟಿ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ಸಮಯಪ್ರಜ್ಞೆ ಮೆರೆದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ರಕ್ಷಿಸಿದ ಘಟನೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಸೋಮವಾರ (ಆಗಸ್ಟ್ 10) ನಡೆದಿದೆ
ಅದೇ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪಾಯಿಂಟ್ಸ್ಮ್ಯಾನ್ ಸಂದೀಪ್ ನಾಯಕ್ ಅವರು ತಕ್ಷಣ ಅಪಾಯವನ್ನು ಅರಿತು, ಕ್ಷಣಾರ್ಧದಲ್ಲಿ ಆ ಸ್ಥಳಕ್ಕೆ ಓಡಿ ಬಂದಿದ್ದಾರೆ. ಕೆಲವೇ ಕ್ಷಣದಲ್ಲಿ ಜೀವದ ಹಂಗು ತೊರೆದು ಪ್ರಯಾಣಿಕನನ್ನು ಬಲವಾಗಿ ಹಿಡಿದು ಪ್ಲಾಟ್ಫಾರ್ಮ್ ಕಡೆಗೆ ಎಳೆದಿದ್ದಾರೆ. ಸಂದೀಪ್ ಅವರ ಈ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.
ಸಂದೀಪ್ ನಾಯಕ್ ಅವರ ಅತ್ಯುತ್ತಮ ಕರ್ತವ್ಯ ನಿಷ್ಠೆ, ಚುರುಕುತನ ಹಾಗೂ ಧೈರ್ಯಕ್ಕೆ ಸುರತ್ಕಲ್ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಕೊಂಕಣ ರೈಲ್ವೆ ವಿಭಾಗ ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಶ್ಲಾಘನೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.
ಸಂದೀಪ್ ನಾಯಕ್ ಅವರ ಸಮಯ ಪ್ರಜ್ಞೆ ಹಾಗೂ ಸಾಹಸಕ್ಕೆ ಕೊಂಕಣ ರೈಲ್ವೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅವರಿಗೆ ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ₹10 ಸಾವಿರ ಬಹುಮಾನ ಪ್ರಕಟಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.








