ಕಾರ್ಕಳ : ಫೇಸ್ಬುಕ್ ಜಾಹೀರಾತು ಮತ್ತು ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ಶೇರ್ ಮಾರ್ಕೆಟ್ ಹಾಗೂ ಐಪಿಒ (IPO) ಹೂಡಿಕೆಯಲ್ಲಿ ದುಪ್ಪಟ್ಟು ಲಾಭ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹32,68,000 ಹಣವನ್ನು ಪಡೆದು ವಂಚಿಸಿರುವ ಆಘಾತಕಾರಿ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಲಕ್ಷ್ಮಣ್ ಎಂಬುವರಿಗೆ ಜುಲೈ 17, 2026 ರಂದು ಫೇಸ್ಬುಕ್ನಲ್ಲಿ ವೀಡಿಯೊ ಜಾಹೀರಾತೊಂದು ಬಂದಿತ್ತು. ಅದರಲ್ಲಿ ‘JB (Julius Baer VIP Group)’ ಹಾಗೂ ‘5paisa’ ಆ್ಯಪ್ಗಳ ಮೂಲಕ ಹಣ ಹೂಡಿಕೆ ಮಾಡಿದರೆ ಶೇರ್ ಮಾರ್ಕೆಟ್ನಲ್ಲಿ ದ್ವಿಗುಣ ಲಾಭ ಗಳಿಸಬಹುದು ಎಂದು ಭರವಸೆ ನೀಡಲಾಗಿತ್ತು. ವೀಡಿಯೊದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಲಕ್ಷ್ಮಣ್ ಅವರು ‘JB (Julius Baer VIP Group)’ ಮತ್ತು ‘5paisa’ ಎಂಬ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗಳಿಗೆ ಜಾಯಿನ್ ಆಗಿದ್ದರು.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿದ್ದ ಅಪರಿಚಿತ ವ್ಯಕ್ತಿಗಳು ಹೆಚ್ಚಿನ ಲಾಭಾಂಶ ತಂದುಕೊಡುವ ಶೇರುಗಳು ಹಾಗೂ IPO ಗಳಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ಅವರ ಮಾತು ನಂಬಿದ ಲಕ್ಷ್ಮಣ್ ಅವರು ಜುಲೈ 17 ರಿಂದ ಆಗಸ್ಟ್ 04, 2026 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹32,68,000/- (ಮೂವತ್ತೆರಡು ಲಕ್ಷದ ಅರವತ್ತೆಂಟು ಸಾವಿರ ರೂಪಾಯಿ) ಹಣವನ್ನು ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ಹಣ ವರ್ಗಾವಣೆಯಾದ ಬಳಿಕ ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡಿದ ಅಸಲು ಹಣವನ್ನಾಗಲಿ ಅಥವಾ ಭರವಸೆ ನೀಡಿದ್ದ ಲಾಭಾಂಶವನ್ನಾಗಲಿ ನೀಡದೆ ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಸಂತ್ರಸ್ತ ಲಕ್ಷ್ಮಣ್ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








