ಮಂಗಳೂರು: ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಚಿಕನ್ನಿಂದ ದುರ್ವಾಸನೆ ಬರುತ್ತಿದೆ ಎಂಬ ಗ್ರಾಹಕರ ದೂರಿನ ಬೆನ್ನಲ್ಲೇ ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್ಸಿ ಮಳಿಗೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೆಎಫ್ಸಿ ಮಳಿಗೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದೆ. ಅಡುಗೆ ಮಾಡುವ ಸ್ಥಳ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ಗಳಲ್ಲಿರುವ ಆಹಾರ ದಾಸ್ತಾನು ಸೇರಿದಂತೆ ಚಿಕನ್ ತಯಾರಿಕೆಗೆ ಬಳಸುವ ಅಡುಗೆ ಎಣ್ಣೆಯ ಗುಣಮಟ್ಟವನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಪೆರಿ ಪೆರಿ ಚಿಕನ್ ಬಗ್ಗೆ ಗ್ರಾಹಕರ ದೂರು
ಆಗಸ್ಟ್ 15ರಂದು ಗ್ರಾಹಕರೊಬ್ಬರು ಕೆ.ಎಸ್. ರಾವ್ ರಸ್ತೆ ಕೆಎಫ್ಸಿ ಮಳಿಗೆಯಿಂದ ‘ಪೆರಿ ಪೆರಿ ಚಿಕನ್’ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದರು. ಆಹಾರ ಮನೆಗೆ ತಲುಪಿದ ಬಳಿಕ ಚಿಕನ್ನಿಂದ ಅಸಹಜ ದುರ್ವಾಸನೆ ಬರುತ್ತಿರುವುದು ಗ್ರಾಹಕರ ಗಮನಕ್ಕೆ ಬಂದಿದೆ. ಚಿಕನ್ ಹಾಳಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ ಅವರು ಈ ಕುರಿತು ಆಹಾರ ಸುರಕ್ಷತಾ ಇಲಾಖೆಗೆ ದೂರು ಸಲ್ಲಿಸಿದ್ದರು.

ಮೂರು ವಿಧದ ಚಿಕನ್ ಸ್ಯಾಂಪಲ್ ಸಂಗ್ರಹ
ದೂರಿನ ಆಧಾರದ ಮೇಲೆ ನಡೆದ ತಪಾಸಣೆ ವೇಳೆ ಅಧಿಕಾರಿಗಳು ವಿವಿಧ ಹಂತಗಳಲ್ಲಿದ್ದ ಚಿಕನ್ನ ಮೂರು ಮಾದರಿಗಳನ್ನು ಪಡೆದುಕೊಂಡಿದ್ದಾರೆ. ಫ್ರೋಜನ್ ಲೆಗ್ ಪೀಸ್, ತಾಪಮಾನ ಸಮತೋಲನಗೊಳಿಸಿದ ಚಿಕನ್ ಹಾಗೂ ಮಸಾಲೆ ಮಿಶ್ರಣ ಮಾಡಲಾಗಿದ್ದ ಚಿಕನ್ನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ ಚಿಕನ್ ಫ್ರೈ ಮಾಡಲು ಬಳಸಲಾಗುತ್ತಿದ್ದ ಎಣ್ಣೆಯ ಮಾದರಿಯನ್ನೂ ಪರೀಕ್ಷೆಗಾಗಿ ಪಡೆದುಕೊಳ್ಳಲಾಗಿದೆ.
ಸಂಗ್ರಹಿಸಿದ ಎಲ್ಲಾ ಮಾದರಿಗಳನ್ನು ಆಹಾರದ ಗುಣಮಟ್ಟ ಹಾಗೂ ಬ್ಯಾಕ್ಟೀರಿಯಾ ಸೇರಿದಂತೆ ಅಗತ್ಯ ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್, ಏಪ್ರಿಲ್ನ ಪ್ಯಾಕ್ ಮಾಡಿದ ಚಿಕನ್ ಪತ್ತೆ
ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ದಾಸ್ತಾನು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಉತ್ಪನ್ನಗಳಿಗೆ ಆರು ತಿಂಗಳಿಗಿಂತ ಹೆಚ್ಚಿನ ಶೆಲ್ಫ್ ಲೈಫ್ ಇದೆ ಎಂದು ಮಳಿಗೆಯ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಳಿಗೆಗೆ ನೋಟಿಸ್, ವರದಿ ಬಳಿಕ ಕಾನೂನು ಕ್ರಮ
ಮಳಿಗೆಯಲ್ಲಿ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅನುಮಾನಾಸ್ಪದ ಅಥವಾ ಹಾಳಾಗಿರುವ ಸಾಧ್ಯತೆಯಿರುವ ಆಹಾರ ಪದಾರ್ಥಗಳನ್ನು ತಕ್ಷಣ ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.
ಈ ಸಂಬಂಧ ಕೆಎಫ್ಸಿ ಮಳಿಗೆಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗುತ್ತಿದೆ. ಸಂಸ್ಥೆಯಿಂದ ಬರುವ ಉತ್ತರ ಹಾಗೂ ಆಹಾರ ಮಾದರಿಗಳ ಪ್ರಯೋಗಾಲಯ ಪರೀಕ್ಷಾ ವರದಿ ಬಂದ ಬಳಿಕ, ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ತಿಳಿಸಿದ್ದಾರೆ.








