ಗದಗ: ಮಾನಸಿಕ ಅಸ್ವಸ್ಥ ಯುವತಿಯನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ಎಸಗಿ, ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಅಮಾನವೀಯ ಘಟನೆಯೊಂದು ಗದಗದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಎಸಗಿದ ಮತ್ತು ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರ್ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ಏಳು ಜನರನ್ನು ಗದಗ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹಣದ ಆಮಿಷ: ದೂರು ನೀಡದಂತೆ ಜೀವಬೆದರಿಕೆ
ಗದಗದ ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬ್ಬೀರಹ್ಮದ್ ಲಂಗೋಟಿ, ಪ್ರದೀಪ್ ನವಲೇಕರ್ ಹಾಗೂ ಭರತ ಕೊರವರ ಎಂಬುವವರು ಯುವತಿಯನ್ನು ಪ್ರತ್ಯೇಕ ನಿರ್ಜನ ಪ್ರದೇಶ ಹಾಗೂ ಮನೆಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಯುವತಿ ಮೂರು ತಿಂಗಳ ಗರ್ಭಿಣಿಯಾದಾಗ ಈ ನೀಚ ಕೃತ್ಯ ಪೋಷಕರಿಗೆ ತಿಳಿದಿದೆ. ಈ ವೇಳೆ ಆರೋಪಿಗಳು ಬಡ ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ದೂರು ನೀಡದಂತೆ ಜೀವಬೆದರಿಕೆ ಹಾಕಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ.
ಅಲ್ಲದೆ, ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಆರ್ಎಂಪಿ ವೈದ್ಯ ಡಾ. ನಾಗರಾಜ್ ಕಮತರ, ಶಿಗ್ಲಿ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಹಾಗೂ ಸಂದೀಪ್ ಎಂಬುವವರ ನೆರವಿನಿಂದ 10 ಗರ್ಭಪಾತ ಮಾತ್ರೆಗಳನ್ನು ನೀಡಿ ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ.
ಗರ್ಭಪಾತ ಕೃತ್ಯಕ್ಕೆ ಸಾಥ್ ನೀಡಿದವರ ವಿರುದ್ಧವೂ ಎಫ್ಐಆರ್
ಈ ಅಕ್ರಮ ಗರ್ಭಪಾತ ಕೃತ್ಯಕ್ಕೆ ಗದಗ ಅಂಜುಮನ್ ಅಧ್ಯಕ್ಷ ಅನ್ವರ್ ಬಾಗೇವಾಡಿ, ಕಾರ್ಯದರ್ಶಿ ಅಲ್ತಾಫ್ ಕೊಪ್ಪಳ ಹಾಗೂ ಎಸ್ಡಿಪಿಐ ಮುಖಂಡ ಬಿಲಾಲ್ ಗೋಕಾವಿ ಸಾಥ್ ನೀಡಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದು, ಈ ಮೂವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ದೂರು ದಾಖಲಿಸಿಕೊಂಡ ಗದಗ ಮಹಿಳಾ ಠಾಣೆ ಸಿಪಿಐ ಜೂಲಕಟ್ಟಿ ತನಿಖೆ ನಡೆಸಿ, ನಾಲ್ವರು ಆರೋಪಿಗಳು ಸೇರಿದಂತೆ ಅಕ್ರಮ ಗರ್ಭಪಾತಕ್ಕೆ ನೆರವಾದ ವೈದ್ಯ, ನರ್ಸ್ ಸೇರಿ ಏಳು ಜನರ ಹೆಡೆಮುರಿ ಕಟ್ಟಿದ್ದಾರೆ.
ಯಾರನ್ನೂ ಬಿಡಲ್ಲ: ಎಸ್ಪಿ ವರಿಷ್ಠಾಧಿಕಾರಿ ರೋಹನ್ ಖಡಕ್ ಎಚ್ಚರಿಕೆ
ಇನ್ನು ವೈದ್ಯರ ಅಧಿಕೃತ ಚೀಟಿ ಇಲ್ಲದೆ ಗರ್ಭಪಾತದ ಮಾತ್ರೆಗಳನ್ನು ಮಾರಾಟ ಮಾಡಿದ ಮೆಡಿಕಲ್ ಶಾಪ್ ಮಾಲೀಕನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಜೊತೆಗೆ ಬಂಧಿತ ಸ್ಟಾಫ್ ನರ್ಸ್ ರೇಖಾ ಅಕ್ರಮ ಗರ್ಭಪಾತ ದಂಧೆಯಲ್ಲಿ ತೊಡಗಿದ್ದಳೇ ಎಂಬ ಬಗ್ಗೆಯೂ ಪೊಲೀಸರು ಆಕೆಯ ಹಿನ್ನೆಲೆ ಕೆದಕುತ್ತಿದ್ದಾರೆ. ‘ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದವರು, ರಾಜಿ ಪಂಚಾಯಿತಿ ಮಾಡಿದವರು ಸೇರಿದಂತೆ ಯಾವುದೇ ಪ್ರಭಾವಿಗಳಿದ್ದರೂ ಯಾರನ್ನೂ ಬಿಡುವುದಿಲ್ಲ’ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.








