ಹಿಸಾರ್: ಹರಿಯಾಣದ ಹಿಸಾರ್‌ನಲ್ಲಿ 14 ವರ್ಷದ ಬಾಲಕಿಯನ್ನು ಯುವಕನನ್ನು ಭೇಟಿಯಾಗಿದ್ದಾಳೆಂಬ ಅನುಮಾನದಿಂದ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ವಿನೋದ್ ಹಾಗೂ ಅಜ್ಜ ಧರ್ಮಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 17ರಂದು ಇಬ್ಬರನ್ನೂ ಬಂಧಿಸಲಾಗಿದ್ದು, ಬಾಲಕಿಯನ್ನು ಹತ್ಯೆಗೈದು ಬಳಿಕ ಆಕೆಯ ಮೃತದೇಹವನ್ನು ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದ ಆರೋಪ ಅವರ ಮೇಲಿದೆ. ಆದಂಪುರ ಠಾಣಾಧಿಕಾರಿ (SHO) ಹರೀಶ್ ಅವರು ಆಗಸ್ಟ್ 18ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಧರ್ಮಪಾಲ್ ಹಾಗೂ ವಿನೋದ್ ಬಾಲಕಿಯ ಮೃತದೇಹವನ್ನು ಚೀಲದಲ್ಲಿ ತುಂಬಿ ಧಾನಿ ಮೊಹಬ್ಬತ್‌ಪುರ ಸೇತುವೆ ಸಮೀಪದ ಕಿಶನ್‌ಗಢ್ ಕಾಲುವೆಗೆ ಎಸೆದಿದ್ದರು. ಈ ಕುರಿತು ಪೊಲೀಸರಿಗೆ ಮಾಹಿತಿ ದೊರೆತ ಬಳಿಕ ಕಾರ್ಯಾಚರಣೆ ನಡೆಸಿ ಕಾಲುವೆಯಿಂದ ಬಾಲಕಿಯ ಮೃತದೇಹವನ್ನು ಹೊರತೆಗೆಯಲಾಗಿದೆ.
ಬಾಲಕಿಯ ತಂದೆಗೆ, ಆಕೆ ಆಗಸ್ಟ್ 9ರಂದು ಓರ್ವ ಯುವಕನನ್ನು ಭೇಟಿಯಾಗಿದ್ದಾಳೆ ಎಂಬ ಅನುಮಾನವಿತ್ತು ಎನ್ನಲಾಗಿದೆ. ಇದೇ ಅನುಮಾನದಿಂದ ವಿನೋದ್ ಹಾಗೂ ಧರ್ಮಪಾಲ್ ಆಗಸ್ಟ್ 11ರ ರಾತ್ರಿ ಬಾಲಕಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.








