ಕೋಲಾರ: ಮಾಡಿಕೊಂಡಿದ್ದ ಕೈಸಾಲ ತೀರಿಸಲು ತಂದೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕರುಳು ಹರಿದ ಮಗನೇ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ಘಟನೆ ನಡೆದ 24 ಗಂಟೆಯೊಳಗೆ ಬಂಗಾರಪೇಟೆ ಪೊಲೀಸರು ಕೃತ್ಯದ ಬೆನ್ನತ್ತಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರಪೇಟೆಯ ವಿಜಯನಗರ ಬಡಾವಣೆಯ ನಿವಾಸಿ ವೆಂಕಟಕೃಷ್ಣ ಬಾಬು (70) ಕೊಲೆಯಾದ ದುರ್ದೈವಿ. ಮೃತ ವೆಂಕಟಕೃಷ್ಣ ಬಾಬು ಅವರಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಕಿರಿಯ ಮಗ ಸೀಮೇಶ್ಕರ್ ತಂದೆಯೊಂದಿಗೆ ಬಂಗಾರಪೇಟೆಯಲ್ಲಿ ವಾಸವಾಗಿದ್ದ. ಸೀಮೇಶ್ಕರ್ ಸುಮಾರು 75 ಸಾವಿರ ರೂಪಾಯಿ ಕೈಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಹಣ ನೀಡುವಂತೆ ತಂದೆಯ ಬಳಿ ಪದೇಪದೇ ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
ಆಗಸ್ಟ್ 29ರ ರಾತ್ರಿ ಕೂಡ ಹಣದ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಸೀಮೇಶ್ಕರ್, ಮನೆಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ತಂದೆಯ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ವೆಂಕಟಕೃಷ್ಣ ಬಾಬು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆ ನಡೆದ ನಂತರ ಆರೋಪಿ ಸೀಮೇಶ್ಕರ್ ತಾನು ಮಾಡಿದ ಕೃತ್ಯವನ್ನು ಮುಚ್ಚಿಹಾಕಲು ಹೈಡ್ರಾಮಾ ಮಾಡಿದ್ದಾನೆ. ‘ಯಾರೋ ಅಪರಿಚಿತರು ಮನೆಗೆ ನುಗ್ಗಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಸುಳ್ಳು ಕಥೆ ಕಟ್ಟಿ, ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದನ್ನು ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದ. ಆದರೆ ಕುಟುಂಬದವರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಬಂಗಾರಪೇಟೆ ಪೊಲೀಸರಿಗೆ ಈ ಪ್ರಕರಣದ ಬಗ್ಗೆ ಅನುಮಾನ ಮೂಡಿದೆ.
ಘಟನಾ ಸ್ಥಳ, ಗಾಯಗಳ ಸ್ವರೂಪ ಹಾಗೂ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಪರಿಶೀಲಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿದರು. ಪೊಲೀಸರು ಸೀಮೇಶ್ಕರ್‌ನನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ಒಳಪಡಿಸಿದಾಗ ಸಾಲದ ವಿಚಾರಕ್ಕಾಗಿ ತಾನೇ ತಂದೆಯನ್ನು ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.








