ವಾರಣಾಸಿ: ಬಿಸಿ ಸಮೋಸಾ ಕೇಳಿದ್ದಕ್ಕೆ ವಕೀಲರೊಬ್ಬರ ಮೇಲೆ ಅಂಗಡಿ ಮಾಲೀಕ ಹಾಗೂ ಆತನ ಸಹಚರರು ಹಲ್ಲೆ ನಡೆಸಿ, ಚಿನ್ನದ ಸರ ಮತ್ತು ₹19,570 ನಗದು ದೋಚಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಸಂತ್ರಸ್ತ ವಕೀಲ ಶಿವಶಂಕರ್ ಸಿಂಗ್ ಅವರು ಜಲ್ಹುಪುರ ಮಾರುಕಟ್ಟೆಯ ಸಿಹಿತಿಂಡಿ ಅಂಗಡಿಗೆ ತೆರಳಿದ್ದಾಗ, ತಟ್ಟೆಗೆ ಬಂದ ಸಮೋಸಾ ತಣ್ಣಗಿದ್ದ ಕಾರಣ ಅದನ್ನು ಬಿಸಿ ಮಾಡಿಕೊಡುವಂತೆ ಕೇಳಿದ್ದರು. ಈ ವಿಚಾರಕ್ಕೆ ಮಾತಿನ ಚಕಮಕಿ ನಡೆದು, ಅಂಗಡಿ ಮಾಲೀಕ ಹಾಗೂ ಐವರು ಸಹಚರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ವೇಳೆ ಶಿವಶಂಕರ್ ಸಿಂಗ್ ಅವರ ಹೆಬ್ಬೆರಳನ್ನು ಬಲವಾಗಿ ತಿರುಚಿ ಗಾಯಗೊಳಿಸಲಾಗಿದ್ದು, ಬಳಿಕ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಜೇಬಿನಲ್ಲಿದ್ದ ₹19,570 ನಗದನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಫೆಬ್ರವರಿ 22ರಂದು ನಡೆದಿದ್ದರೂ, ಆರಂಭದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಇದರಿಂದ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದು, ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಐವರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.








