ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೌಕರನೊಬ್ಬ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಇದೀಗ ಆಘಾತಕಾರಿ ತಿರುವು ಸಿಕ್ಕಿದೆ. ನೆರೆಹೊರೆಯವರಿಂದ ಮಾನಸಿಕ ಕಿರುಕುಳ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ನೌಕರನನ್ನು ಶಿವಪ್ರಸಾದ್ ಪಾಟೀಲ್ ಎಂದು ಗುರುತಿಸಲಾಗಿದೆ. ಬೆಳಗಾವಿಯ ರಾಮತೀರ್ಥನಗರ ಮೂಲದ ಶಿವಪ್ರಸಾದ್ ಸದ್ಯ ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿದ್ದು, ಖಾದಿ ಗ್ರಾಮೋದ್ಯೋಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿದ್ದ ವೇಳೆ ಅವರು ಚಾಕುವಿನಿಂದ ಕೈ ಕೊಯ್ದುಕೊಂಡಿದ್ದು, ತಕ್ಷಣ ಸಿಬ್ಬಂದಿ ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ನೇಹದ ಹೆಸರಿನಲ್ಲಿ ಶುರುವಾಯಿತೇ ಕಿರುಕುಳ?
ಶಿವಪ್ರಸಾದ್ ವಾಸವಿದ್ದ ಕೊಠಡಿಯ ಪಕ್ಕದಲ್ಲಿ ವಾಸಿಸುತ್ತಿದ್ದ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಹಾಗೂ ಸುಮಾ ಪೂಜಾರ್ ಎಂಬವರೊಂದಿಗೆ ಆರಂಭದಲ್ಲಿ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಬಳಿಕ ಅವರು ಶಿವಪ್ರಸಾದ್ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದರು ಹಾಗೂ ಅವರ ಖಾಸಗಿ ಕ್ಷಣಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ನಿರಂತರ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಶಿವಪ್ರಸಾದ್, ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಸಾವಿಗೆ ಮೂವರೇ ಕಾರಣ ಎಂದು ಉಲ್ಲೇಖಿಸಿ, ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.
ಪತ್ರವನ್ನು ಕಚೇರಿಯ ಅಧಿಕೃತ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಪೋಸ್ಟ್ ಮಾಡಿದ ಬಳಿಕ ಶಿವಪ್ರಸಾದ್ ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆ ಬಳಿಕ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಪತ್ರದಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧದ ಆರೋಪಗಳು, ಖಾಸಗಿ ವಿಡಿಯೋ ಮೂಲಕ ಬೆದರಿಕೆ ಹಾಗೂ ಮಾನಸಿಕ ಕಿರುಕುಳದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.








