ತುಮಕೂರು: ಶಾಲೆಯ ಸಮೀಪವಿದ್ದ ನಂದಿನಿ ಡೈರಿಯ ಪಿಲ್ಲರ್ ಏಕಾಏಕಿ ಕುಸಿದು ಬಿದ್ದ ಪರಿಣಾಮ 4ನೇ ತರಗತಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಧನುಷ್ ಮೃತಪಟ್ಟ ಬಾಲಕ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ಬೆಳಿಗ್ಗೆ ಶಾಲೆಗೆ ಬಂದಿದ್ದ ಧನುಷ್ ಹಾಗೂ ಆತನ ಗೆಳೆಯರು ಶಾಲೆಯ ಪಕ್ಕದಲ್ಲಿದ್ದ ನಂದಿನಿ ಡೈರಿ ಕಟ್ಟಡದ ಬಳಿ ಆಟವಾಡುತ್ತಿದ್ದರು. ಡೈರಿಯ ಪಿಲ್ಲರ್ಗೆ ಕಟ್ಟಲಾಗಿದ್ದ ತೋರಣದ ಹಗ್ಗ ಹಿಡಿದು ಮಕ್ಕಳು ಜೋಕಾಲಿ ಆಡುತ್ತಿದ್ದಾಗ, ಏಕಾಏಕಿ ಪಿಲ್ಲರ್ ಕುಸಿದು ಧನುಷ್ ತಲೆಯ ಮೇಲೆ ಬಿದ್ದಿದೆ. ಪಿಲ್ಲರ್ ಭಾರಕ್ಕೆ ಬಾಲಕನ ತಲೆಬುರುಡೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡೈರಿ ಮುಂಭಾಗದ ಪಿಲ್ಲರ್ ಮುಂಚಿನಿಂದಲೂ ಬಿರುಕು ಬಿಟ್ಟಿತ್ತು, ಇದನ್ನು ಸರಿಪಡಿಸದೆ ನಿರ್ಲಕ್ಷ್ಯ ವಹಿಸಿದ್ದೇ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ಜಂಟಿ ದೂರು ನೀಡಿದ್ದು, ಹಂದನಕೆರೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.








