ಬೆಂಗಳೂರು: ಕೆ.ಆರ್. ಪುರ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯ ಡಾಮಿನಿಕ್ ಲೇಔಟ್‌ನ ಸಾಯಿಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಜೂನ್ 22ರಂದು ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾ, ತನ್ನ ಪ್ರಿಯಕರ ಕೆನತ್ ವಿರುದ್ಧ ‘ಮಾಫಿ ಸಾಕ್ಷಿ’ ಹೇಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
29ನೇ ಎಸಿಜೆಎಂ ನ್ಯಾಯಾಲಯಕ್ಕೆ ಶ್ವೇತಾ ಅರ್ಜಿ ಸಲ್ಲಿಸಿ, ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಶ್ವೇತಾ ಹಾಗೂ ಕೆನತ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ತಮಿಳುನಾಡಿನ ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮಿ(48) ಹಾಗೂ ಕಿರಿಯ ಮಗಳು ಸುಪ್ರಿಯಾ(19) ಅವರ ಕೊಲೆ ನಡೆದಿತ್ತು. ಸೋಮಸುಂದರ್- ಮುತ್ತುಲಕ್ಷ್ಮಿ ಅವರ ಹಿರಿಯ ಪುತ್ರಿ ಶ್ವೇತಾ ಹಾಗೂ ಅವರ ಪ್ರಿಯಕರ ಕೆನೆತ್ ಸೇರಿಕೊಂಡು ಮೂವರನ್ನೂ ಜೂನ್ 22ರ ರಾತ್ರಿ ಕೊಲೆ ಮಾಡಿ, ಪುದುಚೆರಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಪುದುಚೆರಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
‘ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ. ಆದರೆ, ಕೊಲೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ನೇರವಾಗಿ ಕೊಲೆ ಮಾಡಿದ್ದು ಕೆನತ್. ಚಾಕುವಿನಿಂದ ಯಾರಿಗೂ ನಾನು ಚುಚ್ಚಿಲ್ಲ. ಕೊಲೆ ಮಾಡುವುದು ಕೆನತ್‌ನ ತೀರ್ಮಾನವಾಗಿತ್ತು. ಹೀಗಾಗಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಕೆನತ್ ವಿರುದ್ಧ ಸಾಕ್ಷಿ ಹೇಳಲು ಸಿದ್ಧ ಇದ್ದೇನೆ’ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ವೇತಾ ಉಲ್ಲೇಖಿಸಿದ್ದಾರೆ ಎಂಬುದು ಗೊತ್ತಾಗಿದೆ.
ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ಮೇಲೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವು ಆರೋಪಿಗೆ ಸೂಚಿಸಿದೆ.
ವರದಿ ನಿರೀಕ್ಷೆಯಲ್ಲಿ ಪೊಲೀಸರು:
‘ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತನಿಖೆ ವೇಳೆ ಜಪ್ತಿ ಮಾಡಿಕೊಂಡ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಲಾಗಿತ್ತು. ಅದರ ವರದಿ ಇನ್ನೂ ಕೈಸೇರಿಲ್ಲ. ವರದಿ ಬಂದ ಬಳಿಕವಷ್ಟೇ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ಕೆನತ್-ಶ್ವೇತಾ ಸಹಜೀವನ ನಡೆಸುತ್ತಿದ್ದರು. ಒಂದೇ ಫ್ಲ್ಯಾಟ್‌ನಲ್ಲಿ ನೆಲಸಿದ್ದರು. ಕೆನತ್ ಜೊತೆಗೆ ವಾಸ ಮಾಡುತ್ತಿರುವುದು ಶ್ವೇತಾ ಪೋಷಕರಿಗೆ ಇಷ್ಟ ಇರಲಿಲ್ಲ. ಪ್ರಶ್ನಿಸಲು ಫ್ಲ್ಯಾಟ್‌ಗೆ ತೆರಳಿದ್ದರು. ಆಗ ಕೊಲೆ ನಡೆದಿತ್ತು.








