ಬೆಂಗಳೂರು:ಗಡಿಪಾರು ಆದೇಶವನ್ನು ಗಾಳಿಗೆ ತೂರಿ ನಗರಕ್ಕೆ ಎಂಟ್ರಿ ಕೊಟ್ಟು, ಸಾರ್ವಜನಿಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಹಾಗೂ ಆತನ ಗ್ಯಾಂಗ್ ಅನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಡಿಪಾರು ಆದೇಶವನ್ನು ಉಲ್ಲಂಘಿಸಿ ನಗರದಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ರೌಡಿ ಧನುಷ್ ಅಲಿಯಾಸ್ ದಡಿಯಾ ಹಾಗೂ ಆತನ ಗ್ಯಾಂಗ್‌ನ ನಾಲ್ವರನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧನುಷ್‌ನನ್ನು ಪೊಲೀಸರು ಒಂದು ವರ್ಷದ ಅವಧಿಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಗಡಿಪಾರು ಮಾಡಿದ್ದರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಣಬ ಗ್ರಾಮಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಈ ಗಡಿಪಾರು ಆದೇಶವನ್ನು ಉಲ್ಲಂಘಿಸಿ ಧನುಷ್ ಹಾಗೂ ಆತನ ಸಹಚರರು ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಧನುಷ್ ಅಲಿಯಾಸ್ ದಡಿಯಾ ಹಾಗೂ ಆತನ ಗ್ಯಾಂಗ್‌ನ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ಬಳಿಕ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.








