ಗದಗ: ಸರ್ಕಾರಿ ಶಾಲೆಯ ಬಿಸಿಊಟದಲ್ಲಿ ಹಲ್ಲಿ ಬಿದ್ದು, ಅದನ್ನು ಸೇವಿಸಿದ ನೂರಾರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೀಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ವಾಂತಿ, ಭೇದಿಯಿಂದ ಬಳಲಿದ ಮಕ್ಕಳು
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಸಾಲು ಸಾಲು ವಿದ್ಯಾರ್ಥಿಗಳಲ್ಲಿ ತೀವ್ರ ಹೊಟ್ಟೆನೋವು, ವಾಂತಿ ಮತ್ತು ಭೇದಿ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಅಸ್ವಸ್ಥಗೊಂಡ ನೂರಕ್ಕೂ ಹೆಚ್ಚು ಮಕ್ಕಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ತುರ್ತಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪೋಷಕರ ಆಕ್ರೋಶ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ನೂರಾರು ಪೋಷಕರು ತಾಲೂಕು ಆಸ್ಪತ್ರೆಯತ್ತ ದೌಡಾಯಿಸಿ ಬಂದಿದ್ದು, ಮಕ್ಕಳ ಸ್ಥಿತಿ ಕಂಡು ಕಣ್ಣೀರಿಟ್ಟರು. ಅಡುಗೆ ತಯಾರಿಸುವಲ್ಲಿ ಮತ್ತು ಸರಬರಾಜು ಮಾಡುವಲ್ಲಿ ತೀವ್ರ ಅಜಾಗರೂಕತೆ ವಹಿಸಿದ ಶಾಲೆಯ ಶಿಕ್ಷಕರು ಹಾಗೂ ಬಿಸಿಊಟ ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ಮತ್ತು ಪೋಷಕರು ಕಟು ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.








