ಮಂಗಳೂರು: ನದಿಗೆ ಬಿದ್ದ ಫುಟ್‌ಬಾಲ್ ಹೆಕ್ಕಿ ಕೊಡಲು ಹೋಗಿ ಈಜು ಬಲ್ಲ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಭಾನುವಾರ ಸಂಜೆ ದಾರುಣವಾಗಿ ಸಾವಿಗೀಡಾದ ಘಟನೆ ನಗರದ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಬಳಿ ನಡೆದಿದೆ.
ಕಸಬಾ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಸಾಲಿ ಹಾಗೂ ಜಹರಾ ದಂಪತಿಯ ಪುತ್ರ ಮಹಮ್ಮದ್ ಸನಾವುಲ್ಲ (25) ಮೃತಪಟ್ಟ ದುರ್ದೈವಿ. ಇಂಟೀರಿಯರ್ ಡಿಸೈನಿಂಗ್ ಹಾಗೂ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಸನಾವುಲ್ಲಾ, ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ತಂದೆ ಮಂಗಳೂರು ಧಕ್ಕೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಭಾನುವಾರ ಸಂಜೆ ಫೆರಿ ಪಾಯಿಂಟ್ ಬಳಿ ಮಕ್ಕಳು ಫುಟ್‌ಬಾಲ್ ಆಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ನದಿಗೆ ಬಿದ್ದಿದೆ. ಅದನ್ನು ತೆಗೆದುಕೊಡಲು ಸನಾವುಲ್ಲಾ ನದಿಗೆ ಇಳಿದಿದ್ದಾರೆ. ಸನಾವುಲ್ಲಾಗೆ ಈಜು ಬರುತ್ತಿತ್ತಾದರೂ ನದಿಯ ಸೆಳೆತ ಅಥವಾ ಆಳದ ವ್ಯತ್ಯಾಸದಿಂದಾಗಿ ಅವರಿಗೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ಥಳೀಯರು ತಕ್ಷಣವೇ ಹುಡುಕಾಟ ನಡೆಸಿ ಸನಾವುಲ್ಲಾನನ್ನು ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.








