ಬೆಳಗಾವಿ : ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಗೌತಮ ಹಣಮಂತ ಭಜಂತ್ರಿ (15) ಸಾವನ್ನಪ್ಪಿದ ದುರದೃಷ್ಟಕರ ವಿದ್ಯಾರ್ಥಿ.
ಹಾಸ್ಟೆಲ್ ವಾರ್ಡನ್ ವಿರುದ್ಧ ಹಲ್ಲೆ ಆರೋಪ: ಕಳೆದ ಗುರುವಾರಷ್ಟೇ ತನ್ನ ಅಕ್ಕನ ಮದುವೆಯಲ್ಲಿ ಪಾಲ್ಗೊಂಡು ವಸತಿ ನಿಲಯಕ್ಕೆ ಹಿಂತಿರುಗಿದ್ದ ಗೌತಮ, ಸಂಜೆ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಹಾಸ್ಟೆಲ್ ವಾರ್ಡನ್ ಮಾಡಿದ ತೀವ್ರ ಹಲ್ಲೆಯಿಂದಾಗಿಯೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತ ಗೌತಮನ ಬೆನ್ನು ಹಾಗೂ ಹಿಂಭಾಗದ ಮೇಲೆ ತೀವ್ರ ಸ್ವರೂಪದ ಬಾಸುಂಡೆ ಗಾಯಗಳು ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪಾಲಕರ ಆಕ್ರಂದನ, ಪೊಲೀಸ್ ತನಿಖೆ: ವಿದ್ಯಾರ್ಥಿ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದ ಸಿಬ್ಬಂದಿ, ಪೋಷಕರಿಗೆ ಮುಂಚಿತವಾಗಿ ಮಾಹಿತಿ ನೀಡದೇ ಮೃತದೇಹವನ್ನು ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಕುರಿತು ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








