42 ವರ್ಷದ ಬೂಟಿಕ್ ಮಾಲಕಿ ರಾಜಿಂದರ್ ಕೌರ್ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಶ್ಯಾಮ್ ಅಲಿಯಾಸ್ ಶಮ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಿಂದರ್ ಕೌರ್ ಅವರು ತಮ್ಮದೇ **‘ರೀತು ಬೂಟಿಕ್’**ನಲ್ಲಿ ಟೈಲರಿಂಗ್ ತರಗತಿಗಳನ್ನೂ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ ಸುಮಾರು 11.54ರ ವೇಳೆಗೆ ಓರ್ವ ವ್ಯಕ್ತಿ ಬೂಟಿಕ್ಗೆ ಪ್ರವೇಶಿಸಿದ್ದು, ಎರಡು ನಿಮಿಷಕ್ಕೂ ಹೆಚ್ಚು ಸಮಯದ ಬಳಿಕ ಹೊರಬಂದು ಶಟರ್ ಎಳೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ. ಕೆಲವೇ ಕ್ಷಣಗಳ ಬಳಿಕ ರಾಜಿಂದರ್ ಕೌರ್ ಅವರೇ ಶಟರ್ ಎತ್ತಿಕೊಂಡು ಹೊರಗೆ ಬಂದಿದ್ದು, ಕುತ್ತಿಗೆಯಿಂದ ರಕ್ತಸ್ರಾವವಾಗುತ್ತಿದ್ದ ಕಾರಣ ತೀವ್ರವಾಗಿ ಅಸ್ವಸ್ಥರಾಗಿದ್ದರು. ಬಳಿಕ ಮತ್ತೆ ಬೂಟಿಕ್ ಒಳಗೆ ತೆರಳಿದ್ದರು.
ಪೊಲೀಸರ ಪ್ರಕಾರ, ಗಾಯಗೊಂಡಿದ್ದ ಕೌರ್ ಅವರು ಬೂಟಿಕ್ನಲ್ಲಿದ್ದ ಡೈರಿಯಲ್ಲಿ ಏನೋ ಬರೆದಿದ್ದರು. ಸ್ಥಳೀಯರು ಹಾಗೂ ದಾರಿಹೋಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಬೂಟಿಕ್ನಲ್ಲಿ ರಕ್ತದ ಕಲೆಗಳಿದ್ದ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ತನ್ನ ಪತಿ ತನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾನೆ ಎಂದು ಕೌರ್ ಬರೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಹಾಯ ಮಾಡುವಂತೆ ಮನವಿ ಮಾಡಿದ್ದು, ಅತ್ತೆ, ನಾದಿನಿಯರಾದ ಪ್ರೀತಿ ಮತ್ತು ನೀತು ಹಾಗೂ ಮೈದುನನ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌರ್ ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ ರತ್ಪುರ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಮಾರು 15 ದಿನಗಳ ಹಿಂದಷ್ಟೇ ಅವರು ಅಲ್ಲಿಗೆ ಸ್ಥಳಾಂತರಗೊಂಡಿದ್ದರು ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪತಿ ಆಕೆಯ ಮೇಲೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂಬ ಅನುಮಾನ ಹೊಂದಿದ್ದ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳೀಯರ ಹೇಳಿಕೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.
ಪಿಂಜೋರ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೌರ್ ಅವರ ಪತಿ ಶ್ಯಾಮ್ ಅಲಿಯಾಸ್ ಶಮ್ಮಿಯನ್ನು ಬಂಧಿಸಿದ್ದಾರೆ. ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಆಯುಧವನ್ನೂ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತೆಯ ಪುತ್ರಿಯರು ಹಾಗೂ ಸ್ಥಳೀಯರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.








