ಚಿಕ್ಕಮಗಳೂರು: ನಗರದ ಖಾಸಗಿ MES ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಈದ್ ಮಿಲಾದ್ ಆಚರಣೆ ನಡೆಸದಂತೆ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಿನ್ಸಿಪಾಲ್ ನೀಡಿದ್ದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರಿನ ಎಂಇಎಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಆಡಳಿತ ಮಂಡಳಿ ಈದ್ ಮಿಲಾದ್ ಆಚರಣೆಗೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಡ್ರೆಸ್ ಕೋಡ್ ಪಾಲಿಸುವಂತೆ ಆಡಳಿತ ಮಂಡಳಿ ಮೆಸೇಜ್ ಕಳುಹಿಸಿದ್ದಾರೆ. ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನೇರವಾಗಿ ಶಾಲೆಗೆ ತೆರಳಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಶಾಲೆ ಪ್ರಿನ್ಸಿಪಾಲ್ ನೀಡಿದ ದೂರಿನನ್ವಯ ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರಾದ ಕೋಟೆ ಪ್ರಸಾದ್, ಬೆಣ್ಣೆ ಕೃಷ್ಣ, ಶಿವಣ್ಣ, ದಿಲೀಪ್ ಶೆಟ್ಟಿ, ಸುನಿಲ್, ರಾಜೇಗೌಡ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಬಿಎನ್ಎಸ್ (BNS) ಸೆಕ್ಷನ್ 329(4), 352 ಹಾಗೂ 190ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಏನಿದೆ ಎಫ್ಐಆರ್ನಲ್ಲಿ?
ಸುಮಾರು 02 ವರ್ಷಗಳಿಂದ ಎಂಇಎಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನರ್ಸರಿಯಿಂದ 06ನೇ ತರಗತಿ ವರೆಗೆ ಕ್ಲಾಸ್ಗಳು ನಡೆಯುತ್ತಿದ್ದು, ಅದಕ್ಕೆ ನಾನು ಪ್ರಾಂಶುಪಾಲೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಶಾಲೆಯಲ್ಲಿ ಉಳಿದಂತೆ ಒಟ್ಟು 21 ಜನ ಶಿಕ್ಷಕರಿದ್ದು ಅದರಲ್ಲಿ 18 ಜನ ಮಹಿಳೆಯರಿದ್ದು, ಇಬ್ಬರು ಮಾತ್ರ ಶಿಕ್ಷಕರಿದ್ದಾರೆ. ಶಾಲೆಯ ನಿಯಮದಂತೆ ಮಕ್ಕಳಿಗೆ ಪ್ರತಿ ಶನಿವಾರ ಕಲರ್ ಡ್ರೆಸ್ ಇದ್ದು ಅದೇ ಪ್ರಕಾರ ಆಗಸ್ಟ್ 29ರಂದು ಮಕ್ಕಳು ಕಲರ್ ಡ್ರೆಸ್ನಲ್ಲಿ ಶಾಲೆಗೆ ಬರುತ್ತಿದ್ದರು.
ಇಂದು ಬೆಳಗ್ಗೆ ಸುಮಾರು 09-15 ಗಂಟೆ ಸಮಯಕ್ಕೆ 07-08 ಜನರ ಗುಂಪು ಏಕಾಏಕಿ ಶಾಲೆಗೆ ನುಗ್ಗಿ ಈದ್ ಮಿಲಾದ್ ಹಬ್ಬದ ಆಚರಣೆ ಮಾಡುತ್ತಿದ್ದೀರಾ ಎಂದು ಜೋರು ಜೋರಾಗಿ ಕೂಗಾಡಿದರು. ನಾನು ಆ ರೀತಿ ಯಾವುದೇ ಆಚರಣೆ ಮಾಡುತ್ತಿಲ್ಲ. ಮಕ್ಕಳು ಶಾಲಾ ನಿಯಮದಂತೆ ಕಲರ್ ಡ್ರೆಸ್ನಲ್ಲಿ ಬಂದಿದ್ದಾರೆ ಎಂದು ಹೇಳಿದರೂ ಕೇಳದೇ ಬಾಯಿಗೆ ಬಂದ ಹಾಗೆ ಬೈಯುತ್ತ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ತಕ್ಷಣ ನಾನು 112 ಕರೆ ಮಾಡಿ ವಿಚಾರ ತಿಳಿಸಿದೆ. ಪೊಲೀಸ್ ಬಂದು ಅವರನ್ನು ಕಳುಹಿಸಿದ್ದಾರೆ. ಕೋಟೆ ಪ್ರಸಾದ್, ಬೆಣ್ಣೆ ಕೃಷ್ಣ, ಶಿವಣ್ಣ, ದಿಲೀಪ್ ಶೆಟ್ಟಿ, ಸುನಿಲ್ ಹಾಗೂ ರಾಜೇಗೌಡ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.








