ದಾವಣಗೆರೆ: ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಯುವಕರು ತಲ್ವಾರ್ ಝಳಪಿಸಿದ್ದಾರೆ.
ಹಳೇ ವೈಷಮ್ಯದಿಂದ ನಡುರಸ್ತೆಯಲ್ಲೇ ತಲ್ವಾರ್ ಹಾಗೂ ದೊಣ್ಣೆಗಳಿಂದ ಯುವಕರು ಪರಸ್ಪರ ಅಟ್ಟಾಡಿಸಿ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಐವರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಬಿ.ಡಿ. ಲೇಔಟ್ ನಿವಾಸಿಗಳಾದ ಮೈನು, ಜುನೇದ್ ಹಾಗೂ ಇರ್ಫಾನ್ ಸೇರಿದಂತೆ ನಾಲ್ಕು ಜನ ಯುವಕರು ರಸ್ತೆಯಲ್ಲಿ ನಿಂತಿದ್ದಾಗ ಮಹಮ್ಮದ್ ಸೇರಿದಂತೆ 20 ಕ್ಕೂ ಹೆಚ್ಚು ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೈನು, ಜುನೇದ್ ಮತ್ತು ಇರ್ಫಾನ್ ಸೇರಿದಂತೆ ಹಲವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಬಿದ್ದಿದ್ದಾರೆ. ತಲೆ ಹಾಗೂ ದೇಹದ ಪ್ರಮುಖ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.ಈ ಸಂಬಂಧ ಅಜಾದ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ








