ರಾಯಚೂರು : ತಂಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಹಿನ್ನೆಲೆಯಲ್ಲಿ, ಮನೆಯಲ್ಲಿ ಊಟ ಮಾಡುತ್ತಿದ್ದ ಯುವಕನೊಬ್ಬನನ್ನು ನೆರೆಮನೆಯ ಯುವಕ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಮಾನ್ವಿ ಪಟ್ಟಣದ ಹನುಮೇಶ್ (32) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಆರೋಪಿ ಶಂಕರ್, ಹತ್ಯೆಯ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಅವಿವಾಹಿತನಾಗಿದ್ದ ಹನುಮೇಶ್ ಭತ್ತದ ವ್ಯಾಪಾರ ಮಾಡಿಕೊಂಡಿದ್ದು, ತಂದೆ-ತಾಯಿ ಹಾಗೂ ತಮ್ಮನ ಜೊತೆ ವಾಸವಾಗಿದ್ದ. ಶುಕ್ರವಾರ ಬೆಳಿಗ್ಗೆ 10:30ರ ಸುಮಾರಿಗೆ ಕುಟುಂಬಸ್ಥರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಹನುಮೇಶ್ ಮನೆಯಲ್ಲಿ ಒಬ್ಬನೇ ಇದ್ದನು. ಊಟ ಮುಗಿಸಿ ವ್ಯಾಪಾರಕ್ಕೆ ಹೊರಡಲು ಸಜ್ಜಾಗುತ್ತಿದ್ದ ವೇಳೆ ಮನೆಗೆ ಏಕಾಏಕಿ ನುಗ್ಗಿದ ಶಂಕರ್, ಹಿಂಬದಿಯಿಂದ ಮಚ್ಚಿನಿಂದ ತಲೆಯ ಭಾಗಕ್ಕೆ ತೀವ್ರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಆರೋಪಿ ಶಂಕರ್ ಹಾಗೂ ಮೃತ ಹನುಮೇಶ್ ಮನೆಗಳು ಅಕ್ಕಪಕ್ಕದಲ್ಲೇ ಇದ್ದವು. ಶಂಕರ್‌ನ ಸಹೋದರಿಯೊಂದಿಗೆ ಹನುಮೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಶಂಕರ್‌ನಲ್ಲಿದ್ದು, ಇದೇ ದ್ವೇಷದಿಂದ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕೃತ್ಯ ಎಸಗುವುದಕ್ಕೂ ಮುನ್ನ ಆರೋಪಿ ಶಂಕರ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೈಯಲ್ಲಿ ಮಚ್ಚು ಹಿಡಿದುಕೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಕೊಲೆಯ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








