ಗುರುಗ್ರಾಮ : ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕ್ ಸವಾರೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿ ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾಜಸ್ಥಾನದ ದೌಸಾದಲ್ಲಿ ಆರೋಪಿಯನ್ನು ಗುರುಗ್ರಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಗುರುಗ್ರಾಮ ಪೊಲೀಸರು ಆರೋಪಿ ಚಾಲಕನ ವಿರುದ್ಧ ‘ಕೊಲೆ ಯತ್ನ’ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪರಾಧಕ್ಕೆ ಕಾನೂನಿನಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಭಾನುವಾರ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಹೆಲ್ಮೆಟ್ ಧರಿಸಿ ತಮ್ಮ ‘ಎಪ್ರಿಲಿಯಾ RS 457’ ಸ್ಪೋರ್ಟ್ಸ್ ಬೈಕ್ನಲ್ಲಿ ತೆರಳುತ್ತಿದ್ದ ಸಿಯಾ ಎಂಬುವರಿಗೆ ಬಿಳಿ ಬಣ್ಣದ ಸೆಡಾನ್ ಕಾರು ಏಕಾಏಕಿ ಬಲಕ್ಕೆ ತಿರುಗಿ ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರೆ ರಸ್ತೆ ಮೇಲೆ ಬಿದ್ದಿದ್ದು, ಘಟನೆಯ ವಿಡಿಯೋ ಅವರ ಬೈಕ್ ನ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಂಧನಕ್ಕೂ ಮುನ್ನ ಅಪರಿಚಿತ ಸ್ಥಳದಿಂದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾ, “ಆ ಬೈಕ್ ಚಲಾಯಿಸುತ್ತಿದ್ದದ್ದು ಪುರುಷನೋ ಅಥವಾ ಮಹಿಳೆಯೋ ಎಂದು ನನಗೆ ತಿಳಿದಿರಲಿಲ್ಲ. ವೀಡಿಯೊದಲ್ಲಿ ಒಂದು ಮುಖವನ್ನು ಮಾತ್ರ ತೋರಿಸಲಾಗುತ್ತಿದೆ, ಬೈಕರ್ ಹುಡುಗಿಯ ಬಗ್ಗೆ ನನಗೆ ವಿಷಾದವಿದೆ” ಎಂದು ಸಾಫ್ಟ್ ಕಾರ್ಡ್ ಪ್ರದರ್ಶಿಸಲು ಯತ್ನಿಸಿದ್ದ.
ಆರೋಪಿಯ ಈ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಸಂತ್ರಸ್ತೆ ಸಿಯಾ, “ನಿಮಗೆ ನಿಜವಾಗಿಯೂ ನನ್ನ ಬಗ್ಗೆ ಕನಿಕರ ಅಥವಾ ಕಾಳಜಿ ಇದ್ದಿದ್ದರೆ ಅಪಘಾತದ ನಂತರ ಕಾರು ನಿಲ್ಲಿಸಿ ಪರೀಕ್ಷಿಸಬೇಕಿತ್ತು. ಡಿಕ್ಕಿ ಹೊಡೆದ ಮೇಲೆ ಕಾರು ನಿಲ್ಲಿಸದೆ ಓಡಿಹೋಗಿದ್ದು ವೀಡಿಯೊದಲ್ಲಿ ಸ್ಪಷ್ಟವಾಗಿದೆ. ಸ್ಥಳದಲ್ಲೇ ನಾನು ಸತ್ತು ಹೋಗಿದ್ದರೆ ಯಾರು ಹೊಣೆ? ಈಗ ತೋರಿಸುತ್ತಿರುವ ಈ ನಕಲಿ ಸಹಾನುಭೂತಿ ಅವನಿಗೆ ಸೂಕ್ತವಲ್ಲ” ಎಂದು ಕಿಡಿಕಾರಿದ್ದಾರೆ. ಸದ್ಯ ಆರೋಪಿಯನ್ನು ದೌಸಾದಲ್ಲಿ ಬಂಧಿಸಿರುವ ಪೊಲೀಸರು, ಆತನನ್ನು ಗುರುಗ್ರಾಮಕ್ಕೆ ಕರೆತಂದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.








