ಇನ್‌ಸ್ಟಾಗ್ರಾಮ್‌ನಲ್ಲಿ 1.46 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಚಂಡೀಗಢದ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಂಜೀತ್ ಕೌರ್ (28) ಅವರ ದಾರುಣ ಸಾವಿನ ನಂತರ, ಅವರ ಕೊನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರಿ ಸಂಚಲನ ಮೂಡಿಸಿದೆ.
‘ನನ್ನನ್ನು ಜೀವಂತವಾಗಿ ಸುಡಲು ಯತ್ನಿಸಲಾಯಿತು’ ಎಂದು ಮಂಜೀತ್ ಕೌರ್ ವಿಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಜುಲೈ 3 ರಂದು ಚಂಡೀಗಢದ ಸೆಕ್ಟರ್ 34 ರಲ್ಲಿ ಮಂಜೀತ್ ಅವರನ್ನು ಶುಭಿ ಮತ್ತು ಪಿಂದಾ ಎಂಬಿಬ್ಬರು ಪರಿಚಿತರು ಮಧ್ಯಪಾನದ ಅಂಗಡಿ ಬಳಿಗೆ ಕರೆಸಿಕೊಂಡು, ಬಲವಂತವಾಗಿ ಅಪಹರಿಸಿದ್ದರು.ಬಳಿಕ ಪಂಜಾಬ್‌ನ ಮೊರಿಂದಾ ಪ್ರದೇಶದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅವರ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದರು.ಸ್ಥಳಕ್ಕೆ ಬಂದ ಮಂಜೀತ್ ಅವರ ಸ್ನೇಹಿತರೊಬ್ಬರು ಕಂಬಳಿಯಿಂದ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಸುಮಾರು 8 ವಾರಗಳ ಕಾಲ ಚಂಡೀಗಢದ PGIMER ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಮಂಜೀತ್ ಕೌರ್, ಆಗಸ್ಟ್ 26 ರಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.
ಮಂಜೀತ್ ತಾಯಿ ಕಾಂತಾ ದೇವಿ ನೀಡಿದ ದೂರಿನನ್ವಯ ರಿಂಕು, ಶುಭಿ ಮತ್ತು ಪಿಂದಾ ಎಂಬುವವರ ವಿರುದ್ಧ ಅಪಹರಣ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತ ಪೊಲೀಸರ ವಿಳಂಬ ಧೋರಣೆ ವಿರುದ್ಧ ಮಂಜೀತ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








