ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ಇಂದು ಜಾಗತಿಕವಾಗಿ ಅತ್ಯಂತ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿದೆ. AI ತಂತ್ರಜ್ಞಾನವು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಅದು ಮಾನವಕುಲಕ್ಕೆ ಅಪಾಯವನ್ನು ಉಂಟುಮಾಡಬಹುದು ಎಂಬ ಆತಂಕವನ್ನು ಅನೇಕ AI ತಜ್ಞರು ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯ ಕಳವಳಗಳ ಕಾರಣದಿಂದಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ AI ಸಂಶೋಧಕರ ಪಟ್ಟಿಗೆ, ಇದೀಗ ಗೂಗಲ್ ಡೀಪ್‌ಮೈಂಡ್‌ನ ಸುರಕ್ಷತಾ ಸಂಶೋಧಕ ಬಿಲಾಲ್ ಚುಗ್ತಾಯಿ ಕೂಡ ಸೇರ್ಪಡೆಗೊಂಡಿದ್ದಾರೆ. “ನಮ್ಮೆಲ್ಲರನ್ನೂ ಕೊಲ್ಲುವ ಸಾಮರ್ಥ್ಯ ಎಐಗೆ ಇದೆ,” ಎಂದು ಅವರು ‘X’ ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಚುಗ್ತಾಯಿ ಅವರು ಗೂಗಲ್ ಡೀಪ್‌ಮೈಂಡ್‌ನಿಂದ ಹೊರಬರಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಸೇಫ್ಟಿ ಸಂಶೋಧಕರಾಗಿ, ಕೃತಕ ಬುದ್ಧಿಮತ್ತೆಯ (AI) ಮಾದರಿಗಳು ಮಾನವರ ಅತ್ಯುತ್ತಮ ಹಿತಾಸಕ್ತಿಗಳಿಗೆ ಅನುಗುಣವಾಗಿಯೇ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿತ್ತು.”ಗೂಗಲ್‌ನಲ್ಲಿ ನಾನು AI ಅಭಿವೃದ್ಧಿಯನ್ನು ನೇರವಾಗಿ ಕಣ್ಣಾರೆ ಕಂಡಿದ್ದೇನೆ. ಈ ತಂತ್ರಜ್ಞಾನವು ಪ್ರಸ್ತುತ ಸಾಗುತ್ತಿರುವ ಸ್ವಾಭಾವಿಕ ದಿಕ್ಕಿನ ಬಗ್ಗೆ ನನಗೂ ಅತ್ಯಂತ ಗಂಭೀರವಾದ ಕಳವಳವಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
AI ಸಂಶೋಧಕರ ಪ್ರಕಾರ, ನಾವು ಈಗಾಗಲೇ ಎಐ ವಿಚಾರದಲ್ಲಿ ಒಂದು ಹಂತವನ್ನು ತಲುಪಿದ್ದೇವೆ. ಇಲ್ಲಿ ಎಐ ಕಾರಣದಿಂದ ಸಂಭವಿಸಬಹುದಾದ ದುರಂತವನ್ನು ತಪ್ಪಿಸಲು ನಮಗೆ ಸಾಕಷ್ಟು ಸಮಯವೇ ಇಲ್ಲದಿರಬಹುದು.”ಎಐ ನಮ್ಮೆಲ್ಲರನ್ನೂ ಕೊಲ್ಲುವಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಇಂತಹ ಪರಿಣಾಮವನ್ನು ತಪ್ಪಿಸಲು ನಮಗಿರುವ ಸಮಯವೂ ಅಂತಿಮ ಹಂತದಲ್ಲಿರಬಹುದು ಎಂಬ ಆತಂಕ ನನಗಿದೆ,” ಎಂದು ಚುಗ್ತಾಯಿ ಹೇಳಿದ್ದಾರೆ.
ಇದೇ ವೇಳೆ, ಗೂಗಲ್ ಡೀಪ್‌ಮೈಂಡ್‌ನ AGI ಸುರಕ್ಷತಾ ತಂಡದ ಭಾಗವಾಗಿದ್ದ ಜೋಸ್ ಎಂಗಲ್ಸ್ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚುಗ್ತಾಯಿ ಅವರಂತೆಯೇ, ಮುಂದುವರಿದ ಎಐ ತಂತ್ರಜ್ಞಾನದ ಭವಿಷ್ಯದ ಬಗ್ಗೆ ತಮಗೂ ಆತಂಕವಿದೆ ಎಂದು ಎಂಗಲ್ಸ್ ಹೇಳಿದ್ದಾರೆ.
“ಮುಂದಿನ ಐದು ವರ್ಷಗಳಲ್ಲಿ ಎಐ ವ್ಯವಸ್ಥೆಗಳು ಭಾರೀ ಹಾನಿಯನ್ನುಂಟುಮಾಡುವ ಭಯಾನಕ ಸಾಧ್ಯತೆ ಇದೆ ಎಂದು ನಾನು ಈಗ ಭಾವಿಸುತ್ತೇನೆ. ಅದರ ನಿಖರ ಸಂಭವನೀಯತೆ ಎಷ್ಟು ಎಂಬುದು ನನಗೆ ತಿಳಿದಿಲ್ಲ. ಆದರೆ, ಈ ಸಮಸ್ಯೆ ಜಗತ್ತಿನಲ್ಲೇ ಅತ್ಯಂತ ಮಹತ್ವದ ಸಮಸ್ಯೆಯಾಗುವಷ್ಟು ಅದರ ಸಾಧ್ಯತೆ ಹೆಚ್ಚಿದೆ ಎಂದು ನಾನು ನಂಬುತ್ತೇನೆ,” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.








