ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ವೃದ್ಧ ದಂಪತಿಯು ಗುಂಡೇಟಿಗೆ ಬಲಿಯಾಗಿದ್ದಾರೆ.
ಮೃತರನ್ನು ಕನ್ನಿಕಂಡ ಕುಟುಂಬದ ಸುಬ್ಬಯ್ಯ (74) ಹಾಗೂ ಅವರ ಪತ್ನಿ ಭೋಜಮ್ಮ (72) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯಂತೆ, ಸುಬ್ಬಯ್ಯ ಅವರು ಪತ್ನಿಗೆ ಗುಂಡು ಹಾರಿಸಿ, ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ದಂಪತಿಯು ತಮ್ಮ ನಿವಾಸದಲ್ಲಿ ಗುಂಡೇಟಿನಿಂದ ರಕ್ತಸ್ರಾವವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ಕೇಸ್ ಸಾಕಷ್ಟು ಕುತೂಹಲ ಮೂಡಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಸೋಮವಾರಪೇಟೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವೂ ಘಟನಾ ಸ್ಥಳದಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಕೃತ್ಯಕ್ಕೆ ಬಳಕೆಯಾದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ.
ದುರಂತಕ್ಕೆ ನಿಖರವಾದ ವೈಯಕ್ತಿಕ, ಕುಟುಂಬಿಕ ಅಥವಾ ಆಸ್ತಿ ವಿವಾದದ ಕಾರಣಗಳು ಇನ್ನು ತಿಳಿದುಬಂದಿಲ್ಲ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರ ಸಮಗ್ರ ತನಿಖೆಯ ಬಳಿಕವೇ ಈ ಭೀಕರ ಘಟನೆಯ ಹಿಂದಿನ ನೈಜ ಸತ್ಯಾಂಶ ಹೊರಬರಬೇಕಿದೆ.








