ತಿರುವನಂತಪುರಂ: ಕೇರಳದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ದಿಢೀರ್ ಪ್ರವಾಹ ಹಾಗೂ ಭೂಕುಸಿತಗಳಿಂದಾಗಿ ಭಾನುವಾರ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಮಲಪ್ಪುರಂ ಜಿಲ್ಲೆಯ ನಿಲಂಬೂರ್-ಅಮರಂಬಲಂ ವ್ಯಾಪ್ತಿಯ ಕೊಟ್ಟಪುಳ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಐವರ ಗುಂಪು ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಸ್ಥಳೀಯರು ಓರ್ವನನ್ನು ರಕ್ಷಿಸಿದ್ದು, ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇನ್ನು ವಾಗಮೋನ್ ಪ್ರವಾಸ ಮುಗಿಸಿ ಸ್ಕೂಟರ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಕೊಟ್ಟಾಯಂ ಜಿಲ್ಲೆಯ ಟೀಕೋಯ್ ಸಮೀಪದ ವೆಲತುಸ್ಸೇರಿಯಲ್ಲಿ ಭೂಕುಸಿತ ಸಂಭವಿಸಿದೆ. ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಕುಸಿದು ಬಿದ್ದ ಪರಿಣಾಮ ಅದರಡಿ ಸಿಲುಕಿದ ತಮಿಳುನಾಡಿನ ಚೆನ್ನೈ ಮೂಲದ ಸಂಗೀತ ಅರುಲ್ ಲಾಲ್ (35) ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಸ್ನೇಹಿತೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರಿನಲ್ಲೂ ಭೂಕುಸಿತ ಸಂಭವಿಸಿದೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿಯ ತಾತ್ಕಾಲಿಕ ಶೆಡ್‌ನಲ್ಲಿ ಆಶ್ರಯ ಪಡೆದಿದ್ದ ಮೂವರ ಮೇಲೆ ಬೆಟ್ಟದ ಇಳಿಜಾರು ಕುಸಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ನೇರ ಎಸ್‌ಎಂಎಸ್ ಮೂಲಕ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ. ವಿಪತ್ತು ನಿರ್ವಹಣಾ ಪಡೆಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಪರಿಸ್ಥಿತಿಯ ಕುರಿತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಘ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಕಚೇರಿ ಸೂಚನೆ ನೀಡಿದೆ.








