ನವದೆಹಲಿ: ನಗ್ನ ಫೋಟೋಗೆ ಮರುಳಾಗಿ ದೇಶದ ರಕ್ಷಣೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಯನ್ನೇ ಪಾಕಿಸ್ತಾನದ ಗುಪ್ತಚರ ಸಂಪರ್ಕ ಹೊಂದಿದ್ದ ವ್ಯಕ್ತಿಗೆ ಸೋರಿಕೆ ಮಾಡಿದ ಆರೋಪ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣ ದೇಶದ ಭದ್ರತಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಪೊಲೀಸರ ಆರೋಪದ ಪ್ರಕಾರ, ಆರೋಪಿ ವಿಂಗ್ ಕಮಾಂಡರ್ 2026ರ ಜನವರಿ 12ರಿಂದ ಏಪ್ರಿಲ್ 1ರವರೆಗೆ ವಾಟ್ಸಾಪ್ ಮೂಲಕ ಪಾಕಿಸ್ತಾನದ ಗುಪ್ತಚರ ಸಂಪರ್ಕ ಹೊಂದಿದ್ದ ಎನ್ನಲಾದ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ ಹಾಗೂ ಸೇನಾ ಸಮರಾಭ್ಯಾಸಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದ ಅತ್ಯಂತ ಆಘಾತಕಾರಿ ಅಂಶವೆಂದರೆ, ಪಾಕಿಸ್ತಾನದ ವ್ಯಕ್ತಿ ವಿಂಗ್ ಕಮಾಂಡರ್‌ಗೆ ನಗ್ನ ಫೋಟೋ ಕಳುಹಿಸಿದ್ದು, ಇದಕ್ಕೆ ಪ್ರತಿಯಾಗಿ ಅವರು ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಯ ಒಂದು ಪುಟವನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಯೊಂದು ನಗ್ನ ಫೋಟೋಗೆ ಪ್ರತಿಯಾಗಿ ಯುದ್ಧ ಯೋಜನೆಯ ದಾಖಲೆಗಳ ಒಂದೊಂದು ಪುಟ ನೀಡುವ ರೀತಿಯ ಒಪ್ಪಂದವನ್ನೂ ಆರೋಪಿ ಪ್ರಸ್ತಾಪಿಸಿದ್ದ ಎನ್ನಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವಂತೆ, ರಹಸ್ಯ ಡ್ರೋನ್ ಘಟಕಗಳ ಸಂಖ್ಯೆ, ಸಂಘಟನಾ ರಚನೆ, ಕಾರ್ಯಾಚರಣಾ ಸಾಮರ್ಥ್ಯ, ಹಾರಾಟದ ಅವಧಿ ಮತ್ತು ಗುರಿ ಗುರುತಿಸುವ ವ್ಯವಸ್ಥೆಗಳ ಮಾಹಿತಿಯನ್ನು ಹಂಚಿಕೊಂಡಿರುವ ಆರೋಪವಿದೆ. ಇದರೊಂದಿಗೆ ಯುದ್ಧದಂತಹ ಪರಿಸ್ಥಿತಿಯಲ್ಲಿ ಡ್ರೋನ್ ಘಟಕಗಳನ್ನು ನಿಯೋಜಿಸಬಹುದಾದ ಸ್ಥಳಗಳು, ಲೇಹ್‌ನಲ್ಲಿ ಯುದ್ಧ ವಿಮಾನಗಳ ನಿಯೋಜನೆ ಹಾಗೂ ರಾಜಸ್ಥಾನದ ಸುರತ್‌ಗಢದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆದ ಸೇನಾ ಸಮರಾಭ್ಯಾಸದ ವಿವರಗಳನ್ನೂ ಸೋರಿಕೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪವೂ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಸಂಪರ್ಕ ಹೊಂದಿದ್ದ ವ್ಯಕ್ತಿ ಕಳುಹಿಸಿದ್ದ ಆ್ಯಪ್‌ಗಳು ಮತ್ತು ಲಿಂಕ್‌ಗಳ ಮೂಲಕ ಮಾಲ್‌ವೇರ್ ಅಥವಾ ಸ್ಪೈವೇರ್ ಅಳವಡಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಆರೋಪಿ ತನ್ನ ಅಧೀನದಲ್ಲಿದ್ದ ಐವರು ಅಧಿಕಾರಿಗಳ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸ್ಪೈವೇರ್ ಅಳವಡಿಸಲು ಸಹಕರಿಸಿದ್ದಾನೆ ಎಂಬ ಆರೋಪವಿದೆ. ಈ ಮೂಲಕ ಅವರ ಸಾಧನಗಳಲ್ಲಿನ ಸೂಕ್ಷ್ಮ ಮಾಹಿತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗಿನ ಸಂವಹನವನ್ನು ಪಡೆಯಲು ಪ್ರಯತ್ನಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯಲ್ಲಿ ಆರೋಪಿ ಮತ್ತು ಪಾಕಿಸ್ತಾನದ ಸಂಪರ್ಕ ಹೊಂದಿದ್ದ ವ್ಯಕ್ತಿಯ ನಡುವೆ 3,008 ಟೆಕ್ಸ್ಟ್ ಸಂದೇಶಗಳು, 65 ಫೋಟೋಗಳು, 42 ಧ್ವನಿ ಕರೆಗಳು, ನಾಲ್ಕು ವಿಡಿಯೋ ಕರೆಗಳು ಹಾಗೂ ಆರು URLಗಳ ವಿನಿಮಯ ನಡೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಐದು ತಿಂಗಳಿಂದ ಅಧಿಕಾರಿ ಬಂಧನದಲ್ಲಿದ್ದು, ಅಧಿಕೃತ ರಹಸ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಎಷ್ಟು ಪ್ರಮಾಣದ ಸೂಕ್ಷ್ಮ ಸೇನಾ ಮಾಹಿತಿ ಸೋರಿಕೆಯಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.








