ಬೆಂಗಳೂರು: ವಿಧಾನಸೌಧದಲ್ಲಿ ವಂದೇ ಮಾತರಂ ಗೀತೆಯನ್ನು ಕಾನೂನುಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ, ರಾಜ್ಯ ಸರ್ಕಾರ ತನ್ನದೇ ಫರ್ಮಾನು ಹೊರಡಿಸಿ, ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಈ ಆಡಳಿತ ನಮ್ಮ ರಾಷ್ಟ್ರದ ಗೀತೆಗೆ ನೇರ ಅಪಮಾನ ಎಸಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ವಿಶೇಷ ಅಧಿವೇಶನದಲ್ಲಿ ವಂದೇ ಮಾತರಂ 2 ಚರಣ ಹಾಡಿದ ವಿಚಾರವಾಗಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, “ರಾಜ್ಯ ಕಾಂಗ್ರೆಸ್ ಸರ್ಕಾರದ ನಕಲಿ ದೇಶಭಕ್ತಿಯ ಮುಖವಾಡ ಇಂದು ಸಂಪೂರ್ಣವಾಗಿ ಕಳಚಿದೆ. ಇದು ಅತ್ಯಂತ ಖಂಡನೀಯ, ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ಗೆ ನಮ್ಮ ರಾಷ್ಟ್ರಗೀತೆಯನ್ನು ಕಂಡರೆ ಏಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದು, ರಾಷ್ಟ್ರೀಯ ಗೌರವ ರಕ್ಷಣೆಗೆ 2026ರ ಇತ್ತೀಚಿನ ಅಧಿವೇಶನದಲ್ಲಿ ಸಂಸತ್ತು ತಂದ ಕಾಯ್ದೆಗೆ ಈ ದುರಾಡಳಿತದ ಆದೇಶ ಅಪಮಾನಿಸಿದಂತೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ದೆಹಲಿಯಲ್ಲಿರುವ ನಕಲಿ ಕುಟುಂಬವೊಂದನ್ನು ಓಲೈಸಲು ಕಾಂಗ್ರೆಸ್ ಈ ದೇಶದ ಹೆಮ್ಮೆಯನ್ನೇ ಬಲಿಕೊಡಲು ನಿಂತಿದೆ. ನಿಮ್ಮ ತುಘಲಕ್ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ. ಈ ದೇಶವಿರೋಧಿ ಕ್ರೂರ ಮನಸ್ಥಿತಿಯ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ. ಕರ್ನಾಟಕದ ಜಾಗೃತ ದೇಶಭಕ್ತ ಜನತೆ ನಿಮ್ಮ ಈ ನೀಚ ಕೃತ್ಯಕ್ಕೆ ತಕ್ಕ ರಾಜಕೀಯ ಪಾಠ ಕಲಿಸುವುದು ನಿಶ್ಚಿತ” ಎಂದು ಪೋಸ್ಟ್ ಮಾಡಿದ್ದಾರೆ.








