ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ವಿವಾದ ಈಗ ಮತ್ತೊಂದು ಹಂತಕ್ಕೆ ಹೋಗಿದ್ದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿಯ ಫೋಟೋವನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೇ ಬಿಡುಗಡೆ ಮಾಡಿದ್ದಾರೆ.
ಜೆಡಿಎಸ್ ಕಾರ್ಯಕರ್ತರನ್ನಯ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆಗಮಿಸಿದ ಕುಮಾರಸ್ವಾಮಿ ಬಾಗೇಪಲ್ಲಿ ಮೂಲದ ಪ್ರಶಾಂತ್ ಫೋಟೋವನ್ನು ರಿಲೀಸ್ ಮಾಡಿದ್ದಾರೆ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗಿರುವ ರೌಡಿಶೀಟರ್ ಫೋಟೋ ಬಿಡುಗಡೆ ಮಾಡಿದ ಹೆಚ್ಡಿಕೆ, ಸರ್ಕಾರದ ವಿರುದ್ಧ ರಾಜಕೀಯ ಷಡ್ಯಂತ್ರದ ಗಂಭೀರ ಆರೋಪ ಮಾಡಿದ್ದಾರೆ
ಸುರ್ಜೇವಾಲಾ ಜೊತೆ ರೌಡಿಶೀಟರ್ ಪ್ರಶಾಂತ್ ಆತ್ಮೀಯವಾಗಿ ತಬ್ಬಿಕೊಂಡು ನಿಂತಿದ್ದಾನೆ ನೋಡಿ. ಈತನನ್ನು ವಶಕ್ಕೆ ಪಡೆದು, ಬೆದರಿಸಿ ನನ್ನ ಹೆಸರನ್ನು ಹೇಳಿಸಲು ಸಂಚು ರೂಪಿಸಿದ್ದಾರೆ “ಅಸಲಿ ‘420’ಗಳು ವಿಧಾನಸೌಧದಲ್ಲಿ ಕುಳಿತಿದ್ದಾರೆ. ನನ್ನ ಹಾಗೂ ನನ್ನ ಕಾರ್ಯಕರ್ತರ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಧಿಕಾರ ಇದೆ ಎಂದು ಯಾರ ಕುಟುಂಬವನ್ನಾದರೂ ಹಾಳು ಮಾಡುತ್ತೀರಾ? ಮೊದಲು ಗೃಹ ಸಚಿವರು ತಮ್ಮ ನಾಲಿಗೆಗೆ ಲಗಾಮು ಹಾಕಿಕೊಂಡು ಮಾತನಾಡಲಿ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವರ್ತನೆ ಖಂಡಿಸಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರಾದ ಸಿ.ಬಿ. ಸುರೇಶ್ ಬಾಬು, ಮಾಜಿ ಶಾಸಕ ಮಾಗಡಿ ಮಂಜುನಾಥ್, ಎಂಎಲ್ಸಿ ಜವರಾಯಿಗೌಡ ಸೇರಿದಂತೆ ಹಲವು ಮುಖಂಡರೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಕುಳಿತು ದಿಢೀರ್ ಧರಣಿ ಆರಂಭಿಸಿದರು.

“ನಮ್ಮ ಕಾರ್ಯಕರ್ತರ ಮೇಲೇಕೆ ಪ್ರಹಾರ? ತನಿಖೆ ಮಾಡುವುದಿದ್ದರೆ ನನ್ನಿಂದಲೇ ಶುರುಮಾಡಿ. ನಾನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೂ ಸಿದ್ಧನಿದ್ದೇನೆ. ಅಧಿಕಾರಿಗಳ ಬಗ್ಗೆ ನನಗೆ ಗೌರವವಿದೆ, ಆದರೆ ಸರ್ಕಾರದ ಒತ್ತಡಕ್ಕೆ ನೀವು ಸಿಲುಕಿದ್ದೀರಿ. ಗೃಹ ಸಚಿವರೇ ಇಲ್ಲಿಗೆ ಬಂದು ಸಮಜಾಯಿಷಿ ನೀಡಲಿ, ಅಲ್ಲಿಯವರೆಗೂ ಎದ್ದೇಳಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ? ಅವರನ್ನೇ ಮೌನವಾಗಿರುವಂತೆ ಮಾಡಲಾಗಿದೆಯೇ” ಎಂದು ಆಕ್ರೋಶ ಹೊರಹಾಕಿದರು.
ಬಳಿಕ ಮಾತನಾಡಿದ ಅವರು, ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ, ಕೇವಲ ಕಮಿಷನರ್ ಅವರ ಮನವಿಗೆ ಗೌರವ ಕೊಟ್ಟು ಧರಣಿ ನಿಲ್ಲಿಸಿದ್ದೇನೆ. ಮಾಧ್ಯಮದ ಹೆಸರನ್ನು ದುರುಪಯೋಗಪಡಿಸಿಕೊಂಡ ಮುಖ್ಯ ಆರೋಪಿಯನ್ನು ತಕ್ಷಣ ಬಂಧಿಸಬೇಕು. ಸಿಎಂ ಜೊತೆಗೂಡಿ ಆತ ಏನೇನು ಮಾಡಿದ್ದಾನೆ ಎಂಬುದು ಹೊರಬರಬೇಕು. ಪೊಲೀಸರಿಗೆ ಎರಡು ದಿನಗಳ ಗಡುವು ನೀಡುತ್ತಿದ್ದೇನೆ. ಅಷ್ಟರಲ್ಲಿ ಪ್ರಮುಖ ಆರೋಪಿ ಅರೆಸ್ಟ್ ಆಗದಿದ್ದರೆ ಎಲ್ಲಾ ಶಾಸಕರ ಸಭೆ ಕರೆದು ರಾಜ್ಯವ್ಯಾಪಿ ಬೃಹತ್ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು. ಜೊತೆಗೆ, ನಾಳೆ ಕೆಪಿಎಸ್ಸಿ ಆಕಾಂಕ್ಷಿಗಳೊಂದಿಗೆ ಸುದೀರ್ಘ ಸಂವಾದ ನಡೆಸುವುದಾಗಿ ತಿಳಿಸಿದರು.








