ಚಿಕ್ಕಬಳ್ಳಾಪುರ : ಸಿಮೆಂಟ್ ತುಂಬಿದ ಲಾರಿಯೊಂದು ಹಿಂಬದಿಗೆ ಚಲಾಯಿಸುವ ವೇಳೆ ದ್ವಿಚಕ್ರ ವಾಹನದ ಮೇಲೆಯೇ ಹರಿದ ಪರಿಣಾಮ, ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನರಾಯನಪಲ್ಲಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ವಿಷ್ಣು ಹಾಗೂ ವಿಜಯ ರಾಜಕುಮಾರ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ಸುಮಾರು 7:00 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ. ಮೃತ ಬಾಲಕರು ದ್ವಿಚಕ್ರ ವಾಹನದಲ್ಲಿ ಹಾಲು ತರಲು ತೆರಳಿದ್ದ ವೇಳೆ, ಅದೇ ರಸ್ತೆಯಲ್ಲಿ ನಿಂತಿದ್ದ ಸಿಮೆಂಟ್ ಲಾರಿಯ ಚಾಲಕ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಒಮ್ಮೆಲೆ ಲಾರಿಯನ್ನು ಹಿಂಬದಿಗೆ (ರಿವರ್ಸ್) ಚಲಾಯಿಸಿದ್ದಾನೆ.
ಈ ವೇಳೆ ಲಾರಿಯ ಹಿಂಬದಿಯ ಚಕ್ರದ ಅಡಿಗೆ ಬಾಲಕರ ದ್ವಿಚಕ್ರ ವಾಹನ ಸಿಲುಕಿಕೊಂಡಿದೆ. ಲಾರಿ ಹರಿದ ರಭಸಕ್ಕೆ ಇಬ್ಬರೂ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮನೆಯಲ್ಲಿದ್ದ ಕಂದಮ್ಮಗಳು ಕಣ್ಣೆದುರೇ ಸಾವನ್ನಪ್ಪಿದ್ದರಿಂದ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕಮೂಡಿದೆ. ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಪೋಷಕರು ನೀಡಬಾರದು ಹಾಗೂ ಮಕ್ಕಳ ಸುರಕ್ಷತೆಗೆ ಸದಾ ಪ್ರಥಮ ಆದ್ಯತೆ ನೀಡಬೇಕು ಎಂಬ ಗಂಭೀರ ಸಂದೇಶವನ್ನು ಈ ದುರ್ಘಟನೆ ಸಾರ್ವಜನಿಕರಲ್ಲಿ ಮೂಡಿಸಿದೆ.








