ಗದಗ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಪರ್ವೀಜ್ ಅಹಮದ್ ನಾಪತ್ತೆ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಸೆಪ್ಟೆಂಬರ್ 13ರಂದು ನಾಪತ್ತೆಯಾಗಿದ್ದ ಪರ್ವೀಜ್, ‘‘ನನ್ನನ್ನು ಹುಡುಕಬೇಡಿ’’ ಎಂದು ಪತ್ರ ಬರೆದಿಟ್ಟು ಹೋಗಿದ್ದರು. ಗುತ್ತಿಗೆದಾರರು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ ಹಾಗೂ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ತಮಗೆ ಬೇರೆ ಮಾರ್ಗವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು. ಈ ಘಟನೆಯು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಪೊಲೀಸರು ಪರ್ವೀಜ್‌ಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.
ಸದ್ಯ ಪರ್ವೀಜ್ ಅಹಮದ್ ಅವರು ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿ ಬಡಾವಣೆ ಪೊಲೀಸರು ಅವರನ್ನು ಮುಂಬೈನಿಂದ ಕರೆತಂದಿದ್ದಾರೆ. ಈಗ ಅವರನ್ನು ಗದಗದಲ್ಲಿ ರಹಸ್ಯ ಸ್ಥಳದಲ್ಲಿ ಇರಿಸಲಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪರ್ವೀಜ್ ಅಹಮದ್ ಯಾಕೆ ನಾಪತ್ತೆಯಾಗಿದ್ದರು, ಮುಂಬೈಗೆ ಹೇಗೆ ತಲುಪಿದರು ಮತ್ತು ಅಲ್ಲಿ ಏನು ಮಾಡುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ವಿವರಗಳು ಪೊಲೀಸ್ ವಿಚಾರಣೆಯ ಬಳಿಕ ಹೊರಬೀಳಬೇಕಿದೆ. ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದ ಈ ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ.








