ಮಣಿಪಾಲ : ಮಣಿಪಾಲ ಪೆರಂಪಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಇರುವ ‘ಸಿನ್ನಮನ್ & ಸೋಲ್’ ಹೋಟೆಲ್‌ನಲ್ಲಿ ತಡರಾತ್ರಿ ಯಾವುದೇ ಪರವಾನಗಿ ಇಲ್ಲದೆ ನಿಯಮ ಬಾಹಿರವಾಗಿ ಸಾರ್ವಜನಿಕರಿಗೆ ಸೇವನೆ ಹಾಗೂ ಪಾರ್ಸೆಲ್ ವಿತರಣೆ ಮಾಡುತ್ತಿದ್ದ ಉದ್ಯಮದ ವಿರುದ್ಧ ಮಣಿಪಾಲ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಂಗ ಉಂಟುಮಾಡಿದ್ದಲ್ಲದೆ, ವಿಚಾರಿಸಲು ಬಂದ ಪೊಲೀಸ್ ಸಿಬ್ಬಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಪೋಸ್ಟ್ ಹಾಕುವುದಾಗಿ ಬೆದರಿಕೆ ಹಾಕಿದ ಹೋಟೆಲ್ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಾಗಿದೆ.
ನವೆಂಬರ್ 2 ರಂದು ಮುಂಜಾನೆ 1:00 ಗಂಟೆಯ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಂಭುಲಿಂಗಯ್ಯ ಎಂ.ಇ. ಅವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಶಿವಳ್ಳಿ ಗ್ರಾಮದ ಮಣಿಪಾಲ ಪೆರಂಪಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿಯ ‘ಸಿನ್ನಮನ್ & SOUL’ ಹೋಟೆಲ್‌ನಲ್ಲಿ ಅವಧಿ ಮೀರಿ ಗ್ರಾಹಕರಿಗೆ ಸರ್ವೀಸ್ ಹಾಗೂ ಪಾರ್ಸೆಲ್ ನೀಡುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು.
ಈ ಅನಧಿಕೃತ ಕಾರ್ಯಾಚರಣೆಯಿಂದಾಗಿ ಉಡುಪಿಯ ವಿವಿಧ ಪರಿಸರಗಳಿಂದ ಸಾರ್ವಜನಿಕರು ಹಾಗೂ ಯುವಕರು ತಡರಾತ್ರಿ ಅಲ್ಲಿ ಜಮಾಯಿಸುತ್ತಿದ್ದು, ಸ್ಥಳೀಯ ನಿವಾಸಿಗಳ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತಿತ್ತು.
ಮಾಹಿತಿ ಆಧರಿಸಿ ಪಿಎಸ್ಐ ಶಂಭುಲಿಂಗಯ್ಯ ಅವರು ಗಸ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಹೋಟೆಲ್ ವ್ಯವಸ್ಥಾಪಕ ಫ್ಲಾಯ್ಡ್ ಜೋಯಲ್ ಡಿಸೋಜ ಎಂಬಾತನನ್ನು ತಡರಾತ್ರಿ ವ್ಯಾಪಾರ ನಡೆಸಲು ಇಲಾಖೆಯ ಅಥವಾ ಸ್ಥಳೀಯಾಡಳಿತದ ಪರವಾನಗಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉದ್ಧಟತನ ಪ್ರದರ್ಶಿಸಿದ ವ್ಯವಸ್ಥಾಪಕ, “ನಮ್ಮ ಬಳಿ ಯಾವುದೇ ಪರವಾನಗಿ ಇಲ್ಲ, ತಡರಾತ್ರಿ ಹೋಟೆಲ್ ನಡೆಸಲು ನಮಗೆ ಯಾವ ಪರವಾನಗಿಯೂ ಬೇಕಿಲ್ಲ. ನೀವು ನಮಗೆ ತೊಂದರೆ ನೀಡಿದರೆ ನಿಮ್ಮ ವಿರುದ್ಧವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಬರೆದು ಹಾಕಿ ನಿಮ್ಮ ಮಾನ ಕಳೆಯುತ್ತೇನೆ” ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ.
‘ಸಿನ್ನಮನ್ & ಸೋಲ್’ ಹೋಟೆಲ್ ಮಾಲಿಕರಿಗೆ ಹಾಗೂ ಆಡಳಿತ ಮಂಡಳಿಗೆ ನಿಯಮಿತ ಸಮಯಕ್ಕೆ ಹೋಟೆಲ್ ಬಂದ್ ಮಾಡುವಂತೆ ಮಣಿಪಾಲ ಪೊಲೀಸರು ಈಗಾಗಲೇ ಹಲವಾರು ಬಾರಿ ಕಟ್ಟುನಿಟ್ಟಿನ ಮೌಖಿಕ ಎಚ್ಚರಿಕೆ ನೀಡಿದ್ದರು. ಆದರೂ ಕಾನೂನು ಪಾಲಿಸದೆ, ಯಾವುದೇ ಪರವಾನಗಿ ಪಡೆಯದೆ ಸಾರ್ವಜನಿಕ ಉಪದ್ರವಕ್ಕೆ ಕಾರಣರಾಗಿರುವುದರಿಂದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/2026 ರಂತೆ, BNS 2023 ಕಲಂ 351(2) (ಅಪರಾಧಿಕ ಬೆದರಿಕೆ) ಹಾಗೂ ಕಲಂ 3(5) (ಸಮಾನ ಉದ್ದೇಶದಿಂದ ಎಸಗಿದ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.








