ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಲಾದ ಸ್ಟಿಂಗ್ ಆಪರೇಷನ್(Sting operation) ಪ್ರಕರಣಕ್ಕೆ ಸಂಬಂಧಿಸಿದಂತೆ
ತನಿಖೆಯಲ್ಲಿ ಸ್ಫೋಟಕ ವಿಚಾರವೊಂದು ಬಯಲಾಗಿದೆ. ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರು ಯುವತಿಯ ಮನೆಗೆ ಹತ್ತಾರು ಬಾರಿ
ಅಲೆದಾಡಿ, ತಮ್ಮ ಕಾರ್ಯಾಚರಣೆಗೆ ಸಹಕರಿಸಿದರೆ ₹4 ಲಕ್ಷ ಕೊಡುವುದಾಗಿ ಆಮಿಷ ಒಡ್ಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
2023ರ ಜನವರಿಯಲ್ಲೇ ನಡೆದಿತ್ತು ಸಂಚು
ಸಂತ್ರಸ್ತ ಯುವತಿಯ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಆಕೆಯ ತಾಯಿ ಹಾಗೂ ಸಹೋದರಿಯರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈ ಬಡತನವನ್ನೇ
ಬಂಡವಾಳ ಮಾಡಿಕೊಳ್ಳಲು ಸಂಚು ರೂಪಿಸಿದ್ದ ವಾಹಿನಿ ಮುಖ್ಯಸ್ಥ ಹಾಗೂ ಕೃಪಾ ಆಳ್ವಾ, 2023ರ ಜನವರಿಯಲ್ಲಿ ಕೇರಳದಲ್ಲಿ ಸಂತ್ರಸ್ತೆಯನ್ನು ಸಂಪರ್ಕಿಸಿದ್ದರು.
ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಸಹಕರಿಸಿದರೆ ₹4 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು.
ಆರಂಭದಲ್ಲಿ ಯುವತಿ ಇದಕ್ಕೆ ಒಪ್ಪಿರಲಿಲ್ಲ. ಆದರೆ 2023ರ ಜನವರಿ ಮತ್ತು ಫೆಬ್ರವರಿಯಲ್ಲಿ ಐದಾರು ಬಾರಿ ಆಕೆಯ ಮನೆಗೆ ಭೇಟಿ ನೀಡಿ ನಿರಂತರವಾಗಿ ಒಪ್ಪಿಸಲು
ಯತ್ನಿಸಿದಾಗ, ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದೆಂಬ ಆಸೆಯಿಂದ ಯುವತಿ ಅಂತಿಮವಾಗಿ ಒಪ್ಪಿಕೊಂಡಿದ್ದರು.
ಯುವತಿಗೆ ತಿಳಿಯದಂತೆ ವೀಡಿಯೊ ರೆಕಾರ್ಡ್
ಸ್ಟಿಂಗ್ ಕಾರ್ಯಾಚರಣೆಗೂ ಮುನ್ನ ಯುವತಿಗೆ ಪ್ರಶ್ನೋತ್ತರಗಳ ಪಟ್ಟಿಯನ್ನು ನೀಡಲಾಗಿತ್ತು. ಅದರಂತೆ ಮಾತನಾಡುತ್ತಿದ್ದಾಗ, ತಮ್ಮ ಸಂಭಾಷಣೆಯನ್ನು ಧ್ವನಿ ಮತ್ತು
ದೃಶ್ಯ ರೂಪದಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ ಎಂಬುದು ಸಂತ್ರಸ್ತೆಗೆ ತಿಳಿದಿರಲಿಲ್ಲ. ವಾಹಿನಿಯ ಮುಖ್ಯಸ್ಥ ನೀಡಿದ್ದ ಮೊಬೈಲ್ ಮೂಲಕ ಬಾಗೆಪಲ್ಲಿ ಪ್ರಶಾಂತ್
ಕುಮಾರ್ ಎಂಬಾತ ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
2 ಗಂಟೆಯ ವೀಡಿಯೊ ಹಾಗೂ ಪ್ರಮುಖ ರಾಜಕಾರಣಿಗೆ ಸೋರಿಕೆ!
2023ರ ಫೆಬ್ರವರಿ 25ರಂದು ಒಟ್ಟು 2 ಗಂಟೆಗಳ ಕಾಲ ಈ ಸ್ಟಿಂಗ್ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು. ಇದರ ಸಂಪೂರ್ಣ ರೆಕಾರ್ಡಿಂಗ್‌ಗಳನ್ನು ವಾಹಿನಿಯ ಮುಖ್ಯಸ್ಥ
ತನ್ನ ವಶದಲ್ಲೇ ಇಟ್ಟುಕೊಂಡಿದ್ದ. ಆದರೆ, ಈ ವರ್ಷದ ಆರಂಭದಲ್ಲಿ ಈ ವೀಡಿಯೊ ಖಾಸಗಿ ವ್ಯಕ್ತಿಯೊಬ್ಬನ ಕೈಸೇರಿದ್ದು, ಆತ ಅದನ್ನು ರಾಜ್ಯದ ಪ್ರಮುಖ
ರಾಜಕಾರಣಿಯೊಬ್ಬರಿಗೆ ತಲುಪಿಸಿದ್ದ ಎಂಬ ಸಂಗತಿ ಮೂಲಗಳಿಂದ ತಿಳಿದುಬಂದಿದೆ.
ಮುಕ್ತಾಯದ ಹಂತ ತಲುಪಿದ ತನಿಖೆ
ಪ್ರಸ್ತುತ ಈ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯು ಅಂತಿಮ ಘಟ್ಟವನ್ನು ತಲುಪಿದ್ದು, ಪೊಲೀಸರು ಅಗತ್ಯ ಡಿಜಿಟಲ್, ವೈಜ್ಞಾನಿಕ ಹಾಗೂ ಸಾಂದರ್ಭಿಕ
ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯ ಮುಖ್ಯಸ್ಥ, ಕೃಪಾ ಆಳ್ವಾ, ಸಂತ್ರಸ್ತೆ ಹಾಗೂ ಕೇರಳದ ಇಬ್ಬರು
ವ್ಯಕ್ತಿಗಳನ್ನು ಈಗಾಗಲೇ ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.








