ಬೆಳ್ತಂಗಡಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಹದಿನಾಲ್ಕು ವರ್ಷಗಳ ಹಿಂದೆ ಸಂಗ್ರಹಿಸಿದ್ದ ವೈದ್ಯಕೀಯ ಮಾದರಿಯನ್ನು ಹೊಸದಾಗಿ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದೆ. ಈ ಪರೀಕ್ಷೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ಸಿಗಬಹುದೇ ಎಂಬ ನಿರೀಕ್ಷೆ ಮೂಡಿದೆ.
2012ರ ಅಕ್ಟೋಬರ್ 10ರಂದು ಸೌಜನ್ಯಾ ಅವರ ಮರಣೋತ್ತರ ಪರೀಕ್ಷೆಗೂ ಮುನ್ನ ಬೆಳ್ತಂಗಡಿ ಠಾಣೆಯ ಪೊಲೀಸರು ಗುಪ್ತಾಂಗದಿಂದ ವೆಜಿನಲ್ ಸ್ವ್ಯಾಬ್ ಮಾದರಿಯನ್ನು ಸಂಗ್ರಹಿಸಿದ್ದರು. ಅಕ್ಟೋಬರ್ 20ರಂದು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆಗ ನಡೆಸಿದ ಪರೀಕ್ಷೆಯಲ್ಲಿ ಮಾದರಿಯಲ್ಲಿ ಫಂಗಸ್ ಪತ್ತೆಯಾಗಿರುವುದಾಗಿ ವರದಿ ನೀಡಲಾಗಿತ್ತು.
ಇದೀಗ ಅದೇ ಹಳೆಯ ಮಾದರಿಯನ್ನು ಆಧುನಿಕ ತಂತ್ರಜ್ಞಾನ ಹೊಂದಿರುವ ಪ್ರಯೋಗಾಲಯದಲ್ಲಿ ಮರುಪರೀಕ್ಷೆಗೆ ಕಳುಹಿಸಲಾಗಿದೆ. ಹೈದರಾಬಾದ್ನ ವಿಶೇಷ ಪ್ರಯೋಗಾಲಯದಲ್ಲಿ ಮಾದರಿಯ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ. ಮಾದರಿಯಲ್ಲಿ ಫಂಗಸ್ ಇದ್ದರೂ ಅದರಲ್ಲಿರುವ ಡಿಎನ್ಎ ಅಂಶಗಳನ್ನು ಪತ್ತೆಹಚ್ಚುವ ಸಾಧ್ಯತೆ ಇರುವುದರಿಂದ ತನಿಖಾ ತಂಡ ಈ ಕ್ರಮಕ್ಕೆ ಮುಂದಾಗಿದೆ.
ಸುಮಾರು ಒಂದು ವಾರದ ಹಿಂದೆಯೇ ಎಸ್ಐಟಿ ಅಧಿಕಾರಿಗಳು ಮಾದರಿಯನ್ನು ಪರೀಕ್ಷೆಗೆ ರವಾನಿಸಿದ್ದು, ಸದ್ಯ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ. ಮಾದರಿಯಲ್ಲಿ ಡಿಎನ್ಎ ಅಂಶಗಳು ಪತ್ತೆಯಾದರೆ, ಅವುಗಳನ್ನು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಡಿಎನ್ಎ ಮಾದರಿಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಲು ಸಾಧ್ಯವಾಗಬಹುದು.
ಈ ಪರೀಕ್ಷೆಯ ಫಲಿತಾಂಶವು ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. 14 ವರ್ಷಗಳ ಹಿಂದಿನ ವೈದ್ಯಕೀಯ ಸಾಕ್ಷ್ಯದಿಂದ ಮಹತ್ವದ ಮಾಹಿತಿ ಲಭ್ಯವಾಗುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.








