ಹಾಸನ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೇಳಿಬಂದಿರುವ ಲಂಚ ಆರೋಪದ ಆಡಿಯೋ-ಚಾಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ ಎಂದು ಆರೋಪಿಸಿ ಡಿಸಿ ಕಚೇರಿಯ ಪಿಎ ಶಶಿಕಿರಣ್ ಅವರು ಹಾಸನ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆ ಸೆಕ್ಷನ್ 336(4), 335 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನಲ್ಲಿ ಏನಿದೆ?
ತಮ್ಮ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಹಾಗೂ ನಕಲಿ ವಾಟ್ಸಾಪ್ ಚಾಟ್ಗಳನ್ನು ಸೃಷ್ಟಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಈ ನಕಲಿ ಸಂದೇಶಗಳಲ್ಲಿ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಅರಸೀಕೆರೆ ತಹಶೀಲ್ದಾರ್ ಸೇರಿದಂತೆ ಡಿಸಿ, ಎಸಿ ಹಾಗೂ ಎಡಿಸಿ ಕಚೇರಿಯ ಪ್ರಮುಖ ಸಿಬ್ಬಂದಿ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದರಿಂದ ತಮ್ಮ ವೈಯಕ್ತಿಕ ವರ್ಚಸ್ಸಿಗೆ ಹಾಗೂ ಆಡಳಿತಾತ್ಮಕ ಪಾವಿತ್ರ್ಯತೆಗೆ ಕಳಂಕ ತರಲಾಗುತ್ತಿದೆ ಎಂದು ಶಶಿಕಿರಣ್ ದೂರಿನಲ್ಲಿ ದೂರಿದ್ದಾರೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಸ್ಫೋಟಕ ದಾಖಲೆಗಳು:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು. ತಮಗೆ ಯಾವುದೋ ಅಧಿಕಾರಿ ಈ ದಾಖಲೆಗಳನ್ನು ತಂದುಕೊಟ್ಟಿರುವುದಾಗಿ ತಿಳಿಸಿದ್ದ ಅವರು, ಮೂರು ಕ್ರಷರ್ ಅನುಮತಿಗಾಗಿ ₹60 ಲಕ್ಷ ಲಂಚ ಕೇಳಿರುವ ಆರೋಪ ಹಾಗೂ ಡಿಸಿ ಲತಾಕುಮಾರಿ ಅವರು ಹಾಸನದಲ್ಲೇ ಮುಂದುವರಿಯಲು ಸಚಿವ ಶಿವಲಿಂಗೇಗೌಡರಿಗೆ ₹75 ಲಕ್ಷ ಲಂಚ ನೀಡಿರುವ ಕುರಿತು ಮಾತುಕತೆ ನಡೆದಿರುವುದಾಗಿ ಆರೋಪಿಸಿದ್ದರು. ಈ ಬೆಳವಣಿಗೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಡಿಸಿ ಲತಾಕುಮಾರಿ ನಿಗೂಢ ಪೋಸ್ಟ್:
ಭ್ರಷ್ಟಾಚಾರ ಆರೋಪ ಹಾಗೂ ದಾಖಲೆ ಬಿಡುಗಡೆಯ ಬೆನ್ನಲ್ಲೇ, ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಸಾಮಾಜಿಕ ಜಾಲತಾಣದ ನಡೆ ಕುತೂಹಲ ಮೂಡಿಸಿದೆ. “ಸಿಂಹ ಮಲಗಿರುವಾಗ ನಾಯಿಗಳು ಬೊಗಳುವ” ಚಿತ್ರವೊಂದನ್ನು ಹಂಚಿಕೊಂಡು, “ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ” ಎಂಬರ್ಥದ ಸಂದೇಶವನ್ನು ತಮ್ಮ ವಾಟ್ಸಾಪ್ ಹಾಗೂ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಈಗ ಜಿಲ್ಲೆಯಲ್ಲಿ ಭಾರೀ ಊಹಾಪೋಹಗಳಿಗೆ ಮತ್ತು ಚರ್ಚೆಗೆ ಕಾರಣವಾಗಿದೆ.








