ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆಯ ವೇಳೆ ಕೃಪಾ ಆಳ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇಪದೇ ವಿಚಾರಣೆಗೆ ಕರೆಸುತ್ತಿರುವುದಕ್ಕೆ ಸಿಸಿಬಿ ತನಿಖಾಧಿಕಾರಿ ರವಿ ವಿರುದ್ಧ ಅವರು ಗರಂ ಆಗಿದ್ದಾರೆ. ಕೃಪಾ ಆಳ್ವ ಅವರಿಗೆ ಮೂರು ಬಾರಿ ಹೇಳಿಕೆ ದಾಖಲಿಸಿದ ನಂತರವೂ ಮತ್ತೆ ಬರುವಂತೆ ಸೂಚನೆ ನೀಡಲಾಗಿದ್ದು, ಇದು ಅವರ ಸಿಟ್ಟಿಗೆ ಕಾರಣವಾಗಿದೆ. ‘‘ಎಷ್ಟು ಬಾರಿ ಹೇಳಿಕೆ ದಾಖಲಿಸಬೇಕು? ನನ್ನದು ಯಾವುದೇ ತಪ್ಪಿಲ್ಲ, ಆದರೂ ಪದೇಪದೇ ಕರೆಸಿ ಕಿರುಕುಳ ನೀಡುತ್ತಿದ್ದೀರಿ’’ ಎಂದು ಅವರು ಪ್ರಶ್ನಿಸಿದ್ದಾರೆ. ತನಿಖೆ ಯಾವ ಉದ್ದೇಶದಿಂದ ಕೂಡಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಕೃಪಾ ಆಳ್ವ ಅವರು ಅಧಿಕಾರಿಗಳಿಗೆ ಕೇಳಿದ್ದಾರೆ.
ಈ ಹಿಂದೆ ಕೃಪಾ ಆಳ್ವಾಗೆ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು. ನಂತರ ಅವರು ವಿಚಾರಣೆಗೆ ಹಾಜರಾಗಿದ್ದರು. ಅವರ ಪಾತ್ರ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ತಿಳಿದಿರುವ ಮಾಹಿತಿ ಕಲೆಹಾಕಲು ಸಿಸಿಬಿ ವಿಚಾರಣೆ ನಡೆಸುತ್ತಿದೆ. ಆದರೆ ನಿರಂತರ ವಿಚಾರಣೆಯಿಂದ ಕೃಪಾ ಆಳ್ವ ತೀವ್ರ ಅಸಮಾಧಾನಗೊಂಡಿದ್ದಾರೆ.
ಈಮಧ್ಯೆ, ‘ನನ್ನ ಜೊತೆ ಖಾಸಗಿ ಮಾಧ್ಯಮದ ಪತ್ರಕರ್ತ ಹಾಗೂ ಮತ್ತೊಬ್ಬರು ಬಂದಿದ್ದರು. ಅವರು ವಿಡಿಯೋ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ’ ಎಂದೂ ಕೃಪಾ ಆಳ್ವ ಹೇಳಿದ್ದಾರೆ.








