ಕಾಪು : ಗೂಗಲ್ ಪೇ ಅಪ್ಲಿಕೇಶನ್ಗೆ ವಂಚಕರು ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2.49 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾಪು ತಾಲ್ಲೂಕಿನ ಕಳತ್ತೂರಿನಲ್ಲಿ ನಡೆದಿದೆ. ಕಳತ್ತೂರಿನ ಬರೆಬೆಟ್ಟು ಹೊಸಮನೆ ನಿವಾಸಿ ವಾಸು ಶೆಟ್ಟಿ (57) ಎಂಬುವರು ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ.
ವಾಸು ಶೆಟ್ಟಿ ಅವರು ತಮ್ಮ ಹೆಸರಿನಲ್ಲಿರುವ ಸರಸ್ವತಿ ಕೋ-ಆಪರೇಟಿವ್ ಬ್ಯಾಂಕ್ನ ಕರೆಂಟ್ ಅಕೌಂಟ್ ಅನ್ನು ಗೂಗಲ್ ಪೇ ಅಪ್ಲಿಕೇಶನ್ಗೆ ಲಿಂಕ್ ಮಾಡಿಕೊಂಡು ಹಣಕಾಸಿನ ವಹಿವಾಟು ನಡೆಸುತ್ತಿದ್ದರು. ಅಕ್ಟೋಬರ್ 9ರಂದು ಸಂಜೆ 5:38ರ ಸುಮಾರಿಗೆ ಮನೆಯಲ್ಲಿದ್ದಾಗ, ಅವರ ಗೂಗಲ್ ಪೇ ಖಾತೆಗೆ ‘GROWW VERIFICATION’ ಎಂಬ ಹೆಸರಿನಲ್ಲಿ ₹0.01 ಜಮೆಯಾದ ಸಂದೇಶ ಬಂದಿತ್ತು.
ಸಂದೇಶ ತೆರೆದು ನೋಡಿದ ಕೆಲವೇ ನಿಮಿಷಗಳಲ್ಲಿ, ಅಂದರೆ ಸಂಜೆ 6:40ಕ್ಕೆ “ನಿಮ್ಮ ಚಾನಲ್ ಲಿಮಿಟ್ ಯಶಸ್ವಿಯಾಗಿ ಬದಲಾಗಿದೆ” ಎಂಬ ಮತ್ತೊಂದು ಸಂದೇಶ ಬಂದಿದೆ.
ಬಳಿಕ ವಾಸು ಶೆಟ್ಟಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಅಪರಿಚಿತ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ. ಮೊದಲಿಗೆ ₹1,25,091.15, ನಂತರ ₹45,926.69, ಬಳಿಕ ₹40,966.82, ನಂತರ ₹26,139.77 ಹಾಗೂ ₹6,175.30 ಸೇರಿದಂತೆ ಒಟ್ಟು ₹2,49,299.73 ಲಕ್ಷ ಹಣವನ್ನು ಖಾತೆಯಿಂದ ಕಡಿತಗೊಳಿಸಿ ವಂಚಿಸಲಾಗಿದೆ. ಯಾರೋ ಅಪರಿಚಿತರು ಗೂಗಲ್ ಪೇ ಖಾತೆಗೆ ಹಣ ಜಮೆ ಮಾಡಿದಂತೆ ಸಂದೇಶ ಕಳುಹಿಸಿ, ದೂರುದಾರರಿಗೆ ತಿಳಿಯದಂತೆ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ಹಣವನ್ನು ತಮ್ಮ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








