ಸುಳ್ಯ: ಅರಂತೋಡು ಪೆರಾಜೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ವಾಸುದೇವ ಬಾಂಜಿಗೋಡಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮ್ಮ ಸಂಬಂಧಿ ರೋಗಿಯನ್ನು ಭೇಟಿ ಮಾಡಿ ಕೊಡಗಿನ ಗೋಣಿಕೊಪ್ಪಲ್ ಗೆ ಹಿಂದಿರುಗುತ್ತಿದ್ದರು.
ರಿಕ್ಷಾ ಪ್ರಯಾಣಿಕರನ್ನು ಅರಂತೋಡಿಗೆ ಬಿಟ್ಟು ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಕಾರು ಮತ್ತು ರಿಕ್ಷಾ ಎರಡೂ ಜಖಂಗೊಂಡಿದೆ. ರಿಕ್ಷಾ ಚಾಲಕನನ್ನು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆನ್ನಿನ ಮುಖ್ಯ ಮೂಳೆಗೆ ಬಲವಾದ ಏಟು ಬಿದ್ದಿದೆ ಎಂದು ತಿಳಿದು ಬಂದಿದೆ.








