ನವದೆಹಲಿ: ಕ್ಯಾನ್ಸರ್ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಆರೋಪ ಎದುರಿಸುತ್ತಿರುವ ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಪ್ರಶಾಂತ್ ಬಾಬು ಇದೀಗ ದೆಹಲಿ ಪೊಲೀಸರ ಬಲೆಗೆ ಸಿಲುಕ್ಕಿದ್ದಾನೆ. ಕರ್ನಾಟಕದ ವಿಶೇಷ ತನಿಖಾ ತಂಡ ಈಗಾಗಲೇ ಆತನನ್ನು ಬಂಧಿಸಿತ್ತು. ಇದೀಗ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ತನಿಖೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ನೀಡಬೇಕಿದ್ದ ಇಂಜೆಕ್ಷನ್ಗಳನ್ನೂ ಹಣಕ್ಕೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ತನಿಖೆಯ ವೇಳೆ ಪ್ರಶಾಂತ್ ಬಾಬು ನಡೆಸುತ್ತಿದ್ದ ಎನ್ನಲಾದ ವಂಚನೆಯ ವಿಧಾನ ಬಯಲಾಗಿದೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಎರಡು ಕ್ಯಾನ್ಸರ್ ಇಂಜೆಕ್ಷನ್ಗಳನ್ನು ಖರೀದಿಸಿದಾಗ ಕಂಪನಿಯು ಒಂದು ಇಂಜೆಕ್ಷನ್ ಉಚಿತವಾಗಿ ನೀಡುತ್ತಿತ್ತು. ಆದರೆ ಈ ಕೊಡುಗೆಯ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡದೆ, ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್ಗಳಿಗೂ ಹಣ ಪಡೆದು ಮಾರಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲ, ಇಂಜೆಕ್ಷನ್ ಬಳಸಿದ ಬಳಿಕ ರೋಗಿ ಮೃತಪಟ್ಟರೆ ಉಳಿದ ಇಂಜೆಕ್ಷನ್ಗಳನ್ನು ವಾಪಸ್ ಪಡೆದು ಮತ್ತೊಬ್ಬರಿಗೆ ಮೂಲ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ. ಈ ಮೂಲಕ ಕ್ಯಾನ್ಸರ್ ರೋಗಿಗಳ ಅನಿವಾರ್ಯತೆಯನ್ನೇ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಕಲಿ ಔಷಧಿ ದಂಧೆಯ ಜಾಲ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಒಟ್ಟು ಆರು ರಾಜ್ಯಗಳಲ್ಲಿ ವ್ಯಾಪಿಸಿತ್ತು ಎನ್ನಲಾಗಿದೆ. ಹತ್ತಾರು ಖಾಸಗಿ ಆಸ್ಪತ್ರೆಗಳು ಹಾಗೂ ನೂರಾರು ಔಷಧ ಮಳಿಗೆಗಳ ಮೂಲಕ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಪೂರೈಕೆಯಾಗಿರುವ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಈ ಜಾಲದ ಮೂಲಕ ಎಷ್ಟು ಇಂಜೆಕ್ಷನ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ? ಎಷ್ಟು ರೋಗಿಗಳು ವಂಚನೆಗೆ ಒಳಗಾಗಿದ್ದಾರೆ? ಈ ದಂಧೆಯಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ? ಎಂಬುದರ ಕುರಿತು SIT ತನಿಖೆ ಮುಂದುವರಿಸಿದೆ.
ಔಷಧಿ ಪೂರೈಕೆ ಮಾಡುವುದಾಗಿ ನಂಬಿಸಿ 2 ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ಪ್ರಶಾಂತ್ ಬಾಬು ವಿರುದ್ಧ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದ ದೆಹಲಿ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ. ಸದ್ಯ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ, ಕ್ಯಾನ್ಸರ್ ಔಷಧಿ ದಂಧೆಯ ಸಂಪೂರ್ಣ ಜಾಲ, ಅದರ ಹಣಕಾಸಿನ ವ್ಯವಹಾರ ಹಾಗೂ ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಕುರಿತು ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿವೆ. ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯನ್ನೇ ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ತನಿಖೆಯ ಮುಂದಿನ ಹಂತದಲ್ಲಿ ಈ ಜಾಲದ ಇನ್ನಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.








