ಕೊಟ್ಟಾಯಂ : ಚರ್ಚ್ ವಾರ್ಷಿಕೋತ್ಸವದ ಸಂಗೀತ ಕಾರ್ಯಕ್ರಮದಲ್ಲಿ ಅಯ್ಯಪ್ಪ ಭಕ್ತಿಗೀತೆ ಹಾಡುವುದನ್ನು ತಡೆಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಚರ್ಚ್ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ತಕ್ಷಣವೇ ವೇದಿಕೆಯಿಂದ ಹೊರಹಾಕಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಚರ್ಚ್ ಧರ್ಮಗುರುಗಳ ವಿಶೇಷ ಸೂಚನೆಯ ಮೇರೆಗೆ ಐದು ಅಯ್ಯಪ್ಪ ಭಕ್ತಿಗೀತೆಗಳನ್ನು ಹಾಡಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಪಾಲಾ ಸಮೀಪದ ಕಿಳಪರಾಯರ್ನಲ್ಲಿರುವ ಸೇಂಟ್ ಗ್ರೆಗೋರಿಯೊಸ್ ಚರ್ಚ್ ಸ್ಥಾಪನೆಯ 100ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಂಗೀತ ಉತ್ಸವದಲ್ಲಿ ಈ ಘಟನೆ ನಡೆದಿದೆ.
ಕೇರಳದ ಚರ್ಚ್ ಉತ್ಸವಗಳಲ್ಲಿ ಸಾಮಾನ್ಯವಾಗಿ ಹಾಡಲಾಗುವ ಜನಪ್ರಿಯ ಅಯ್ಯಪ್ಪ ಭಕ್ತಿಗೀತೆ ‘ಪಲ್ಲಿಕೆಟ್ಟು ಶಬರಿಮಲೈಕ್ಕ್’ ಹಾಡನ್ನು ಗಾಯಕ ರಶೀದ್ ವೇದಿಕೆಯಲ್ಲಿ ಹಾಡುತ್ತಿದ್ದರು. ಈ ವೇಳೆ ಬಿಳಿ ಶರ್ಟ್ ಮತ್ತು ಮುಂಡು ಧರಿಸಿದ್ದ ವ್ಯಕ್ತಿಯೊಬ್ಬ ಏಕಾಏಕಿ ವೇದಿಕೆಗೆ ನುಗ್ಗಿ ಗಾಯಕನನ್ನು ತಡೆದಿದ್ದಾನೆ. ‘‘ಚರ್ಚ್ ಆವರಣದಲ್ಲಿ ಅಯ್ಯಪ್ಪ ಗೀತೆ ಹಾಡಬಾರದು, ಕೇವಲ ಕ್ರಿಶ್ಚಿಯನ್ ಹಾಡುಗಳನ್ನು ಮಾತ್ರ ಹಾಡಬೇಕು’’ ಎಂದು ಆತ ಗಲಾಟೆ ಎಬ್ಬಿಸಲು ಯತ್ನಿಸಿದ್ದಾನೆ.
ವ್ಯಕ್ತಿಯ ವರ್ತನೆಯಿಂದ ಆಕ್ರೋಶಗೊಂಡ ಪ್ರೇಕ್ಷಕರು ಹಾಗೂ ಸ್ಥಳೀಯರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ತಕ್ಷಣವೇ ವೇದಿಕೆಗೆ ಧಾವಿಸಿದ ಚರ್ಚ್ ಸಮಿತಿ ಸದಸ್ಯರು ಆತನನ್ನು ಹಿಡಿದು ಹೊರಕ್ಕೆ ಕಳುಹಿಸಿದರು. ಗಲಾಟೆ ಮಾಡಿದ ವ್ಯಕ್ತಿ ಸ್ಥಳೀಯ ನಿವಾಸಿಯಲ್ಲ ಎಂದು ತಿಳಿದುಬಂದಿದೆ
ವ್ಯಕ್ತಿಯನ್ನು ಹೊರಹಾಕಿದ ಬಳಿಕ ಮಧ್ಯಪ್ರವೇಶಿಸಿದ ಚರ್ಚ್ ಧರ್ಮಗುರುಗಳು ಹಾಗೂ ಆಡಳಿತ ಮಂಡಳಿಯು, ಗಾಯಕ ರಶೀದ್ ಅವರಿಗೆ ‘ಪಲ್ಲಿಕೆಟ್ಟು ಶಬರಿಮಲೈಕ್ಕ್’ ಹಾಡನ್ನು ಮತ್ತೊಮ್ಮೆ ಪೂರ್ಣವಾಗಿ ಹಾಡುವಂತೆ ವಿಶೇಷವಾಗಿ ವಿನಂತಿಸಿದರು. ಅಲ್ಲದೆ, ನಿಗದಿಯಾಗಿದ್ದ ಎರಡು ಹಾಡುಗಳ ಬದಲಿಗೆ ‘ಪಂಪಾ ಗಣಪತಿ’ ಸೇರಿದಂತೆ ಒಟ್ಟು ಐದು ಹಿಂದೂ ಭಕ್ತಿಗೀತೆಗಳನ್ನು ಹಾಡುವಂತೆ ಸೂಚಿಸಿದರು.
ಪಾದ್ರಿಗಳ ಈ ನಿರ್ಧಾರಕ್ಕೆ ನೆರೆದಿದ್ದ ಜನರು ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿದ್ದು, ಹಾಡುಗಳಿಗೆ ಧ್ವನಿಗೂಡಿಸಿದರು. ಕೋಮು ಸೌಹಾರ್ದತೆ ಎತ್ತಿಹಿಡಿದ ಕಿಳಪರಾಯರ್ ಚರ್ಚ್ ಆಡಳಿತ ಮಂಡಳಿ ಹಾಗೂ ಸ್ಥಳೀಯರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.








